ಭಾರತೀಯ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ (Anant Nag) ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ನೀಡಲಾಗಿದೆ. ಭಾರತೀಯ ವಿದ್ಯಾಭವನದಲ್ಲಿ ಇಂದು (ಅ.7) ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆದಿದೆ. ಸಿನಿಮಾ ರಂಗದಲ್ಲಿನ ಸಾಧನೆ ಗುರುತಿಸಿ ಅವರಿಗೆ ಈ ಗೌರವ ನೀಡಲಾಗಿದೆ. ಈ ವೇಳೆ ಮಾತನಾಡಿದ ಅನಂತ್ ನಾಗ್ ಅವರು ತಮ್ಮ ಸಿನಿಮಾ ಮತ್ತು ರಾಜಕೀಯದ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ‘ನಾನು ಬಹಳ ವರ್ಷಗಳ ಹಿಂದೆ ರಾಜಕೀಯ ಭಾಷಣ ಕೇಳಲು ಹೋಗಿದ್ದೆ. ಅಲ್ಲಿ ಭಾಷಣ ಮಾಡಲು ಬಂದಿದ್ದು ಅಟಲ್ ಬಿಹಾರಿ ವಾಜಪೇಯಿ. ಅವರು ದೇವಿಯೋ, ಸಜ್ಜನೋ ಎಂದು ಮಾತು ಆರಂಭಿಸಿದ್ರು. ಅವರ ಮಾತು ಕೇಳಿ ನನಗೆ ರೋಮಾಂಚನ ಆಗಿತ್ತು. ಇವತ್ತು ನನಗೆ ಬಹಳ ಸಂತೋಷವಾಗಿದೆ. ಇಷ್ಟು ಜನರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಪುಣ್ಯ’ ಎಂದು ಅನಂತ್ ನಾಗ್ ಹೇಳಿದ್ದಾರೆ.
‘ನನಗೆ ಯಾವತ್ತೂ ಪ್ರಶಸ್ತಿಗಳತ್ತ ಹೆಚ್ಚು ಒಲವು ಇರಲಿಲ್ಲ. ಪತ್ನಿ ಮತ್ತು ಮಗಳ ಒತ್ತಾಯಕ್ಕೆ ನಾನು ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿದೆ. ಹೊನ್ನಾವರದಲ್ಲಿದ್ದಾಗ 8ನೇ ತರಗತಿವರೆಗೂ ನಾನು ಕನ್ನಡದಲ್ಲೇ ಒದಿದೆ. ಮುಂಬೈಗೆ ಹೋಗಿ ಆಂಗ್ಲ ಮಾಧ್ಯಮಕ್ಕೆ ಸೇರಿದ ಕಾರಣ ನಾನು ಓದಿನಲ್ಲಿ ಹಿಂದೆ ಬಿದ್ದೆ. ನಾನು ಮೊದಲು ನೋಡಿದ ಚಿತ್ರ ‘ರತ್ನಗಿರಿ ರಹಸ್ಯ’. ಮುಂಬೈನಲ್ಲಿ ಓದುವಾಗ ಅಲ್ಲಿ ದೇವಾನಂದ್, ರಾಜ್ ಕಪೂರ್ ಮುಂತಾದವರ ಬಗ್ಗೆ ಮಾತಾಡುತ್ತಿದ್ದರು. ಅದು ನನಗೆ ಹೊಸದಾಗಿತ್ತು. ನಾನು ಅಭಿನಯಿಸಿದ ಮೊದಲ ಸಿನಿಮಾ ‘ಸಂಕಲ್ಪ’. ಕನ್ನಡ ಚಿತ್ರರಂಗವನ್ನು ಬೆಳೆಸಿದ ಕೀರ್ತಿ ಡಾ. ರಾಜ್ಕುಮಾರ್ ಅವರಿಗೆ ಸಲ್ಲಬೇಕು’ ಎಂದು ಅನಂತ್ ನಾಗ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:27 pm, Fri, 7 October 22