ಶಿವರಾಜ್ ಕುಮಾರ್ ಹುಟ್ಟುವೆಂದರೆ ಅಭಿಮಾನಿಗಳಿಗೆ ಹಬ್ಬ. ಬಹುತೇಕ ಪ್ರತಿವರ್ಷವೂ ಅಭಿಮಾನಿಗಳು ಶಿವರಾಜ್ ಕುಮಾರ್ ನಿವಾಸದ ಮುಂದೆ ನೆರೆದು ಅವರೊಟ್ಟಿಗೆ ಕೇಕ್ ಕತ್ತರಿಸಿ, ಹಾರ ಹಾಕಿ, ಘೋಷಣೆಗಳನ್ನು ಕೂಗಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ಈ ಬಾರಿಯೂ ಸಹ ಅದೇ ಯೋಜನೆಯಲ್ಲಿ ಅಭಿಮಾನಿಗಳಿದ್ದರು. ಆದರೆ ಶಿವರಾಜ್ ಕುಮಾರ್ ನಿರ್ಣಯವೊಂದನ್ನು ಮಾಡಿದ್ದು, ತಾವು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ. ಅದಕ್ಕಾಗಿ ಕ್ಷಮೆಯನ್ನೂ ಸಹ ಕೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿವರಾಜ್ ಕುಮಾರ್, ‘ಅಭಿಮಾನಿ ದೇವರುಗಳಿಗೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗುವುದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು ಹುಟ್ಟುಹಬ್ಬಕ್ಕೆ ಇಲ್ಲದೆ ಇದ್ರೂ ನಿಮ್ಮ ಜೊತೆ ಭೈರತಿ ರಣಗಲ್ ಇರ್ತಾನೆ, ಜುಲೈ 12 ರಂದು ಬೆಳಿಗ್ಗೆ 10:10 ಕ್ಕೆ, ನಿಮ್ಮ ಆಶೀರ್ವಾದ ಸದಾ ಇರಲಿ’ ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ:ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
ಶಿವರಾಜ್ ಕುಮಾರ್ ಹುಟ್ಟುಹಬ್ಬ ಜುಲೈ 12 ರಂದು ಇದ್ದು ಆ ದಿನ ಶಿವರಾಜ್ ಕುಮಾರ್ ನಟನೆಯ ಹಲವು ಸಿನಿಮಾಗಳ ಅಪ್ಡೇಟ್ಗಳು ಹೊರಬೀಳಲಿವೆ. ‘ಭೈರತಿ ರಣಗಲ್’ ಟ್ರೈಲರ್, ‘ಭೈರವನ ಕೊನೆ ಪಾಠ’ ಸಿನಿಮಾದ ಪೋಸ್ಟರ್, ‘45’ ಸಿನಿಮಾದ ಪೋಸ್ಟರ್, ‘ಉತ್ತರಕಾಂಡ’ ಸಿನಿಮಾದ ಪೋಸ್ಟರ್, ಶಿವಣ್ಣ, ರಾಮ್ ಚರಣ್ ತೇಜ ಜೊತೆಗೆ ನಟಿಸುತ್ತಿರುವ ತೆಲುಗಿನ ಸಿನಿಮಾದ ಪೋಸ್ಟರ್ ಹೀಗೆ ಅನೇಕ ಸಿನಿಮಾಗಳ ಅಪ್ಡೇಟ್ಗಳು ಹೊರಬೀಳಲಿವೆ. ಶಿವಣ್ಣನ ಸಿನಿಮಾ ಇಷ್ಟಪಡುವವರಿಗೆ ಅಂದು ಹಬ್ಬವೇ ಆಗಲಿದೆ.
ಅಂದಹಾಗೆ ಇತ್ತೀಚೆಗೆ ಕೆಲವು ಸಿನಿಮಾ ನಟರು ತಮ್ಮ ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ದರ್ಶನ್ ಪ್ರಕರಣವೇ ಕಾರಣ ಎನ್ನಲಾಗುತ್ತಿದೆ. ಚಿತ್ರರಂಗದ ಪ್ರಮುಖ ನಟನೊಬ್ಬ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಣೆ ಸೂಕ್ತವಲ್ಲ ಎಂಬ ಕಾರಣಕ್ಕೆ ನಟರುಗಳು ತಮ್ಮ ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್, ಆ ಬಳಿಕ ಪ್ರಜ್ವಲ್ ದೇವರಾಜ್ ಹಾಗೂ ಲೂಸ್ ಮಾದ ಯೋಗಿ ಅವರುಗಳು ಸಹ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಿಲ್ಲ. ಅಂತೆಯೇ ಈಗ ಶಿವಣ್ಣ ಸಹ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:08 am, Thu, 11 July 24