ಕಷ್ಟಕಾಲದಲ್ಲಿ ಸಿನಿಮಾ ಕಾರ್ಮಿಕರ ಕೈ ಹಿಡಿದ ಶಿವರಾಜ್​ಕುಮಾರ್​; 10 ಲಕ್ಷ ರೂ. ನೆರವು

ಗೀತಾ ಶಿವರಾಜ್​ಕುಮಾರ್​ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಶಿವರಾಜ್​ಕುಮಾರ್​ ಅವರು ಈ ಸಹಾಯ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ. ನೀಡಲಾಗಿದೆ.

ಕಷ್ಟಕಾಲದಲ್ಲಿ ಸಿನಿಮಾ ಕಾರ್ಮಿಕರ ಕೈ ಹಿಡಿದ ಶಿವರಾಜ್​ಕುಮಾರ್​; 10 ಲಕ್ಷ ರೂ. ನೆರವು
ಶಿವರಾಜ್​ಕುಮಾರ್​

Updated on: Jun 22, 2021 | 4:06 PM

ಕೊರೊನಾ ವೈರಸ್​ ಹಾವಳಿಯಿಂದಾಗಿ ಎಲ್ಲ ಕ್ಷೇತ್ರಗಳೂ ತತ್ತರಿಸಿವೆ. ಪ್ರತಿದಿನದ ದುಡಿಮೆಯನ್ನು ನಂಬಿಕೊಂಡಿದ್ದ ದೊಡ್ಡ ಶ್ರಮಿಕ ವರ್ಗಕ್ಕೆ ಕಷ್ಟ ಆಗಿದೆ. ಜೀವನೋಪಾಯಕ್ಕಾಗಿ ನಿತ್ಯ ಕೆಲಸ ಮಾಡುತ್ತಿದ್ದವರು ಲಾಕ್​ಡೌನ್​ ಕಾರಣದಿಂದ ತಿಂಗಳುಗಟ್ಟಲೆ ಮನೆಯಲ್ಲೇ ಕೈ ಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಸಿನಿಮಾ ಕ್ಷೇತ್ರದ ಕಾರ್ಮಿಕರು ಈ ಸಮಸ್ಯೆ ಎದುರಿಸಿದ್ದಾರೆ. ಅಂಥ ಕಾರ್ಮಿಕರ ಸಹಾಯಕ್ಕೆ ಈಗ ಶಿವರಾಜ್​ಕುಮಾರ್​ ಧಾವಿಸಿದ್ದಾರೆ. ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ‘ಹ್ಯಾಟ್ರಿಕ್​ ಹೀರೋ’ ಶಿವಣ್ಣ 10 ಲಕ್ಷ ರೂ. ನೀಡಿದ್ದಾರೆ.

ಗೀತಾ ಶಿವರಾಜ್​ಕುಮಾರ್​ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಶಿವರಾಜ್​ಕುಮಾರ್​ ಅವರು ಈ ಸಹಾಯ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ. ನೀಡಲಾಗಿದೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್​, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮುಂತಾದವರ ಸಮ್ಮುಖದಲ್ಲಿ ಚೆಕ್​ ಹಸ್ತಾಂತರಿಸಲಾಯಿತು.

ಸ್ಯಾಂಡಲ್​ವುಡ್​ನ ಚಿರಯುವಕ ಶಿವರಾಜ್​ಕುಮಾರ್​ ಅವರ ಕೈಯಲ್ಲಿ ಈಗಲೂ ಹಲವಾರು ಸಿನಿಮಾಗಳಿಗೆ. ಬಹುಬೇಡಿಕೆಯ ನಟನಾಗಿ ಚಾರ್ಮ್​ ಉಳಿಸಿಕೊಂಡಿರುವ ಅವರು ಸದ್ಯ ಭಜರಂಗಿ 2, ವೇದ, ಶಿವಪ್ಪ ಮುಂತಾದ ಚಿತ್ರಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಲಾಕ್​ಡೌನ್​ ತೆರವುಗೊಂಡಿದ್ದು, ಹೊರಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಒಳಾಂಗಣ ಶೂಟಿಂಗ್​ಗೆ ಅನುಮತಿ ನೀಡಬೇಕು ಎಂದು ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್​ ಬಣಕಾರ್​ ಅವರು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ನಟ ಪುನೀತ್​ ರಾಜ್​ಕುಮಾರ್​ ಅವರು ಕೂಡ ಹತ್ತು ಲಕ್ಷ ರೂ. ಧನಸಹಾಯ ಮಾಡಿದ್ದರು. ಅದೇ ರೀತಿ ಚಿತ್ರರಂಗದ ಅನೇಕರು ಈ ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ವಿಜಯ್​ ಕಿರಗಂದೂರು ಅವರು ಕನ್ನಡ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡಿದ್ದರು. ಉಪೇಂದ್ರ, ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ ಸೇರಿದಂತೆ ಹಲವರು ಜನಪರ ಕಾರ್ಯ ಮಾಡುತ್ತಿದ್ದಾರೆ.  ನಟ ಯಶ್​ ಕೂಡ ಚಿತ್ರೋದ್ಯಮದ ಕಾರ್ಮಿಕರು, ತಂತ್ರಜ್ಞರಿಗೆ ತಲಾ 5 ಸಾವಿರ ರೂಪಾಯಿ ನೀಡುವ ಮೂಲಕ ಸಹಾಯ ಮಾಡಿದ್ದರು.

ಇದನ್ನೂ ಓದಿ:

ಶಿವರಾಜ್​ಕುಮಾರ್​-ಸುಧಾರಾಣಿ ‘ಆನಂದ್’​ ಚಿತ್ರಕ್ಕೆ 35 ವರ್ಷ; ಅಪರೂಪದ ಫೋಟೋ ಹಂಚಿಕೊಂಡ ನಟಿ

550ಕ್ಕೂ ಹೆಚ್ಚು ಬಾರಿ ರೀ-ರಿಲೀಸ್​ ಆದ ಶಿವರಾಜ್​ಕುಮಾರ್​-ಉಪೇಂದ್ರ ಓಂ ಚಿತ್ರಕ್ಕೆ 26 ವರ್ಷ; ಸಿನಿಮಾ ಮಾಡಿದ ದಾಖಲೆಗಳೆಷ್ಟು?

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us