ಶಿವರಾಜ್ಕುಮಾರ್ (Shivarajkumar) ನಟನೆಯ ‘ವೇದ’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂತು. ಈ ಚಿತ್ರ ಯಶಸ್ಸು ಕಂಡಿತು. ‘ವೇದ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು ಎ. ಹರ್ಷ. ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ನಲ್ಲಿ ಬಂದ ನಾಲ್ಕನೇ ಸಿನಿಮಾ ಇದಾಗಿದೆ. ಈಗ ಎ. ಹರ್ಷ (A. Harsha) ಅವರು ಟಾಲಿವುಡ್ಗೆ ಹಾರಿದ್ದಾರೆ. ಗೋಪಿಚಂದ್ ನಟನೆಯ 31ನೇ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಪೂಜೆ ಇಂದು (ಮಾರ್ಚ್ 3) ನಡೆದಿದೆ.
ಎ. ಹರ್ಷ ಅವರು ಚಿತ್ರರಂಗಕ್ಕೆ ಬಂದಿದ್ದು 2007ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅವರು ಕೆಲವು ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಶಿವರಾಜ್ಕುಮಾರ್ ಅವರ ಫೇವರಿಟ್ ಡೈರೆಕ್ಟರ್ ಎನಿಸಿಕೊಂಡಿದ್ದಾರೆ ಹರ್ಷ. 2013ರಲ್ಲಿ ಬಂದ ‘ಭಜರಂಗಿ’ ಚಿತ್ರದಲ್ಲಿ ಹರ್ಷ ಹಾಗೂ ಶಿವಣ್ಣ ಒಟ್ಟಾಗಿ ಕೆಲಸ ಮಾಡಿದರು. 2015ರಲ್ಲಿ ‘ವಜ್ರಕಾಯ’ ರಿಲೀಸ್ ಆಯಿತು. ‘ಭಜರಂಗಿ 2’ ಹಾಗೂ ‘ವೇದ’ ಚಿತ್ರ ಕೂಡ ಇವರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದೆ. ಈಗ ಅವರು ಗೋಪಿಚಂದ್ ಜೊತೆ ಕೈ ಜೋಡಿಸಿದ್ದಾರೆ.
ಹರ್ಷ ಅವರು ಇಲ್ಲಿಯವರೆಗೆ ನಿರ್ದೇಶನ ಮಾಡಿದ ಅಷ್ಟೂ ಚಿತ್ರಗಳು ಕನ್ನಡದ್ದೇ. ಈಗ ಅವರು ಇದೇ ಮೊದಲ ಬಾರಿಗೆ ತೆಲುಗಿಗೆ ಹಾರಿದ್ದಾರೆ. ‘ವೇದ’ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಯಿತು. ಹೀಗಾಗಿ ತೆಲುಗಿನಲ್ಲಿ ಒಂದಷ್ಟು ಮಂದಿಗೆ ಹರ್ಷ ಅವರ ಪರಿಚಯ ಇದೆ. ಈ ಚಿತ್ರವನ್ನು ‘ಶ್ರೀ ಸತ್ಯ ಸಾಯಿ ಆರ್ಟ್ಸ್’ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ. ತಿಂಗಳಾಂತ್ಯಕ್ಕೆ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ‘ಕೆಜಿಎಫ್ 2’ ಬಳಿಕ ರವಿ ಬಸ್ರೂರ್ ಖ್ಯಾತಿ ಹೆಚ್ಚಿದೆ. ಅವರನ್ನು ಹಲವು ಆಫರ್ಗಳು ಹುಡುಕಿ ಬರುತ್ತಿವೆ. ಈಗ ಹರ್ಷ-ಗೋಪಿಚಂದ್ ಕಾಂಬಿನೇಷನ್ಗೆ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಕಬ್ಜ’ ಚಿತ್ರಕ್ಕಾಗಿ ಬಂದೂಕು ಹಿಡಿದು ಬಂದ ಶಿವರಾಜ್ಕುಮಾರ್; ರಿಲೀಸ್ ಹೊಸ್ತಿಲಲ್ಲಿ ಸಿಕ್ತು ಹೊಸ ಅಪ್ಡೇಟ್
ಗೋಪಿಚಂದ್ ಅವರು ಟಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. 2001ರಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಹರ್ಷ ನಿರ್ದೇಶನದ ಸಿನಿಮಾಗಳಲ್ಲಿ ಆ್ಯಕ್ಷನ್ ಹೆಚ್ಚಿರುತ್ತದೆ. ಈ ಚಿತ್ರದಲ್ಲೂ ಅದು ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Fri, 3 March 23