
ಶಿವರಾಜ್ಕುಮಾರ್ (Shivarajkumar) ಅವರು ಇಂದು (ಜುಲೈ 12) 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಹೋದರ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನ ಹಿನ್ನೆಲೆಯಲ್ಲಿ ಅವರು ಬರ್ತ್ಡೇಯನ್ನು ಆಚರಿಸಿಕೊಂಡಿಲ್ಲ. ಆದರೆ, ಶಿವಣ್ಣನ ಬರ್ತ್ಡೇ ಪ್ರಯುಕ್ತ ಅವರ ನಟನೆಯ ಹೊಸ ಚಿತ್ರಗಳ ಪೋಸ್ಟರ್ ರಿಲೀಸ್ ಆಗುತ್ತಿದೆ. ಅದರಲ್ಲಿ ಹೆಚ್ಚು ಗಮನ ಸೆಳೆದಿದ್ದು ಶ್ರೀನಿ ನಿರ್ದೇಶನ ಮಾಡುತ್ತಿರುವ ‘ಘೋಸ್ಟ್’ ಚಿತ್ರದ (Ghost Movie) ಫಸ್ಟ್ ಲುಕ್. ಕಿಚ್ಚ ಸುದೀಪ್ ಅವರು ಈ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಶ್ರೀನಿ ಅವರು ಸ್ಯಾಂಡಲ್ವುಡ್ನಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ‘ಬೀರ್ಬಲ್’ ಅಂತಹ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಓಲ್ಡ್ ಮಾಂಕ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ನಟಿಸಿದ್ದರು. ಈ ಚಿತ್ರ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಅವರಿಗೆ ಶಿವರಾಜ್ಕುಮಾರ್ ಚಿತ್ರಕ್ಕೆ ಆ್ಯಕ್ಷನ್ಕಟ್ ಹೇಳುವ ಅವಕಾಶ ಸಿಕ್ಕಿದ್ದು, ಅವರು ಸಖತ್ ಖುಷಿಪಟ್ಟಿದ್ದಾರೆ. ಶಿವರಾಜ್ಕುಮಾರ್ ಬರ್ತ್ಡೇ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಇದನ್ನು ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಶಿವರಾಜ್ಕುಮಾರ್-ಶ್ರೀನಿ ಕಾಂಬಿನೇಷನ್ ಚಿತ್ರಕ್ಕೆ ‘ಘೋಸ್ಟ್’ ಎಂದು ಹೆಸರು ಇಟ್ಟಾಗಲೇ ಕೌತುಕ ಹೆಚ್ಚಾಗಿತ್ತು. ಈಗ ‘ಘೋಸ್ಟ್’ ಚಿತ್ರದ ಪೋಸ್ಟರ್ ಈ ಕೌತುಕವನ್ನು ದ್ವಿಗುಣ ಮಾಡಿದೆ. ಪೋಸ್ಟರ್ನಲ್ಲಿ ಗನ್ ಹಾಗೂ ಕಾರು ಎರಡೂ ಇದೆ. ಅದರ ಹಿಂದೆ ಶಿವರಾಜ್ಕುಮಾರ್ ನಿಂತಿದ್ದಾರೆ. ‘ಹ್ಯಾಪಿ ಬರ್ತ್ಡೇ ಕಿಂಗ್ ಆಫ್ ಆಲ್ ಮಾಸಸ್’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಮಕ್ಕಳಿಂದ ಶಿವರಾಜ್ಕುಮಾರ್ಗೆ ಕ್ಯೂಟ್ ಬರ್ತ್ಡೇ ವಿಶ್; ದೇವಸ್ಥಾನದಲ್ಲಿ ವಿಶೇಷ ಪೂಜೆ
ಈ ಪೋಸ್ಟರ್ಅನ್ನು ಸುದೀಪ್ ಅವರು ಅನಾವರಣ ಮಾಡಿರುವುದು ವಿಶೇಷ. ಟ್ವಿಟರ್ನಲ್ಲಿ ಫಸ್ಟ್ ಪೋಸ್ಟರ್ ಹಂಚಿಕೊಂಡು ತಂಡಕ್ಕೆ ಹಾಗೂ ಶಿವಣ್ಣನಿಗೆ ಸುದೀಪ್ ವಿಶ್ ಮಾಡಿದ್ದಾರೆ. ಈ ಟ್ವೀಟ್ ಸಾವಿರಾರು ಬಾರಿ ರೀ ಟ್ವೀಟ್ ಆಗಿದೆ. ಶಿವರಾಜ್ಕುಮಾರ್ ಜತೆ ಈ ಸಿನಿಮಾದಲ್ಲಿ ಮತ್ತೆ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸಂದೇಶ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದಲ್ಲದೆ, ‘ಸತ್ಯಮಂಗಳ’, ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ ‘45’ ಚಿತ್ರಗಳ ಬಗ್ಗೆಯೂ ಅಪ್ಡೇಟ್ ನೀಡಲಾಗಿದೆ.
Published On - 3:11 pm, Tue, 12 July 22