ನಟ ಶಿವರಾಜ್ಕುಮಾರ್ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ‘ಜೈಲರ್’ (Jailer) ಸಿನಿಮಾದಲ್ಲಿ ಅವರು ಮಾಡಿದ ಸಣ್ಣ ಪಾತ್ರಕ್ಕೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ರಜನಿಕಾಂತ್ (Rajinikanth) ಅವರ ಸ್ನೇಹಿತನಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರರಾಜ್ಯಗಳ ಪ್ರೇಕ್ಷಕರೂ ಕೂಡ ಈ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಪಾತ್ರದ ಹೆಸರು ನರಸಿಂಹ. ಒಂದು ವೇಳೆ ನರಸಿಂಹನ ಪಾತ್ರವನ್ನೇ ಪ್ರಧಾನವಾಗಿ ಇಟ್ಟುಕೊಂಡು ಹೊಸ ಸಿನಿಮಾ ಮಾಡಿದರೆ ಹೇಗಿರುತ್ತದೆ? ಈ ಬಗ್ಗೆ ಶಿವರಾಜ್ಕುಮಾರ್ (Shivarajkumar) ಪ್ರತಿಕ್ರಿಯೆ ನೀಡಿದ್ದಾರೆ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಜೈಲರ್ ಸಿನಿಮಾದ ಕಥಾನಾಯಕ ಟೈಗರ್ ಕಷ್ಟದ ಸಂದರ್ಭದಲ್ಲಿ ಇರುತ್ತಾನೆ. ಆಗ ಆತ ತಮಿಳುನಾಡಿನಿಂದ ಕರ್ನಾಟಕದ ಮಂಡ್ಯಕ್ಕೆ ಬಂದು ತನ್ನ ಸ್ನೇಹಿತ ನರಸಿಂಹನ ಬಳಿ ಸಹಾಯ ಕೇಳುತ್ತಾನೆ. ನರಸಿಂಹ ಕಳಿಸುವ ಶಾರ್ಪ್ ಶೂಟರ್ಗಳ ಸಹಾಯದಿಂದ ವಿಲನ್ಗಳನ್ನು ಟೈಗರ್ ಮಟ್ಟ ಹಾಕುತ್ತಾನೆ. ಈ ಎಲ್ಲ ಸನ್ನಿವೇಶಗಳಲ್ಲಿ ಶಿವಣ್ಣ ಮಾಡಿರುವ ನರಸಿಂಹ ಪಾತ್ರ ಸಖತ್ ಹೈಲೈಟ್ ಆಗಿದೆ. ಚಿತ್ರಮಂದಿರದಲ್ಲಿ ಜನರಿಂದ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಶಿವರಾಜ್ಕುಮಾರ್ ಅವರಿಗೆ ಅಚ್ಚರಿ ಆಗಿದೆ. ಒಂದು ವೇಳೆ ಈ ಪಾತ್ರದ ಮೇಲೆ ಹೊಸ ಸಿನಿಮಾ ಮಾಡುವುದಾದರೆ ತಮಗೇನೂ ಅಭ್ಯಂತರ ಇಲ್ಲ ಎಂದು ಶಿವಣ್ಣ ಹೇಳಿದ್ದಾರೆ.
ಇದನ್ನೂ ಓದಿ: ನಿಖಿಲ್ ಕುಮಾರ್ ಸಿನಿಮಾದ ಸೆಟ್ಗೆ ಭೇಟಿ ನೀಡಿದ ಶಿವರಾಜ್ಕುಮಾರ್; ಫೋಟೋ ವೈರಲ್
‘ಅದು ಹೇಗೆ ಮೂಡಿಬರುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಅದನ್ನು ಕ್ರಿಯೇಟ್ ಮಾಡಬೇಕು. ಜೈಲರ್ ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಅವರ ಜವಾಬ್ದಾರಿ ಹೆಚ್ಚಾಗಿದೆ. ಜೈಲಿನಲ್ಲಿ ಒಂದು ದೃಶ್ಯದ ಚಿತ್ರೀಕರಣ ಮಾಡಬೇಕಿತ್ತು. ಆದರೆ ನಂತರದಲ್ಲಿ ಅದರ ಅವಶ್ಯಕತೆ ಇಲ್ಲ ಅಂತ ಅವರೇ ಹೇಳಿದರು. ಅದು ಏನಾಗುತ್ತೋ ನನಗೆ ತಿಳಿದಿಲ್ಲ. ಇದೇ ರೀತಿ ಮೂಡಿಬರುವುದಾದರೆ ನನಗೆ ಏನೂ ಅಭ್ಯಂತರ ಇಲ್ಲ. ಗ್ರೇ ಪಾತ್ರಗಳನ್ನು ಕಟ್ಟಿಕೊಡುವಲ್ಲಿ ನೆಲ್ಸನ್ ಫೇಮಸ್’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ‘ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಚಿಂತನೆಯನ್ನು ಮಕ್ಕಳು ಅಳವಡಿಸಿಕೊಳ್ಳಲಿ’: ಶಿವರಾಜ್ಕುಮಾರ್
ಆಗಸ್ಟ್ 10ರಂದು ‘ಜೈಲರ್’ ಸಿನಿಮಾ ಬಿಡುಗಡೆ ಆಗಿತ್ತು. ವಿಶ್ವಾದ್ಯಂತ ಈ ಸಿನಿಮಾ ಅಂದಾಜು 600 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರದ ಸಕ್ಸಸ್ ಬಳಿಕ ಶಿವರಾಜ್ಕುಮಾರ್ ಅವರಿಗೆ ಪರಭಾಷೆಯಿಂದ ಬರುವ ಆಫರ್ಗಳು ಹೆಚ್ಚಾಗಿದೆ. ಈಗಾಗಲೇ ಅವರು ಧನುಶ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದು, ಆ ಸಿನಿಮಾದ ಬಿಡುಗಡೆಗಾಗಿ ಫ್ಯಾನ್ಸ್ ಕಾದಿದ್ದಾರೆ. ಇನ್ನೂ ಅನೇಕ ನಿರ್ದೇಶಕರು ಶಿವರಾಜ್ಕುಮಾರ್ ಅವರಿಗೆ ಕಥೆ ಹೇಳಲು ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.