
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಗಣೇಶ ಚತುರ್ಥಿಗೆ ‘ಭಜರಂಗಿ 2’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದ್ದಿದ್ದರಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಶಿವರಾಜ್ಕುಮಾರ್ ನಟನೆಯ ಈ ಬಹುನಿರೀಕ್ಷಿತ ಚಿತ್ರದ ಹೊಸ ರಿಲೀಸ್ ಡೇಟ್ ತಿಳಿದುಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಅಂಥ ಅಪ್ಪಟ ಅಭಿಮಾನಿಗಳಿಗೆಲ್ಲ ಇಂದು (ಸೆ.26) ‘ಭಜರಂಗಿ 2’ ತಂಡ ಗುಡ್ ನ್ಯೂಸ್ ನೀಡಿದೆ. ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅಲ್ಲದೆ, ಟ್ವಿಟರ್ನಲ್ಲೂ ಟ್ರೆಂಡ್ ಆಗುತ್ತಿದೆ. ಈ ಚಿತ್ರ ಅ.29ರಂದು ಬಿಡುಗಡೆ ಆಗಲಿದೆ.
ನಿರ್ದೇಶಕ ಎ. ಹರ್ಷ ಮತ್ತು ಶಿವರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಈ ಹಿಂದೆ ತೆರೆಕಂಡಿದ್ದ ‘ಭಜರಂಗಿ’ ಚಿತ್ರ ಸೂಪರ್ ಹಿಟ್ ಆಗಿತ್ತು. ಹಾಗಾಗಿ ‘ಭಜರಂಗಿ 2’ ಈಗ ಸಖತ್ ಹೈಪ್ ಸೃಷ್ಟಿ ಮಾಡಿದೆ. ಈ ಬಾರಿ ಎ. ಹರ್ಷ ಯಾವ ರೀತಿ ಮೋಡಿ ಮಾಡಿದ್ದಾರೆ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಿ ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ.
‘ಭಜರಂಗಿ 2’ ಸಿನಿಮಾ ಅ.29ರಂದು ಬಿಡುಗಡೆ ಆಗಲಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಅಭಿಮಾನಿಗಳು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಪರಿಣಾಮವಾಗಿ ಟ್ವಿಟರ್ನಲ್ಲಿ ‘ಭಜರಂಗಿ 2’ ಟ್ರೆಂಡ್ ಆಗುತ್ತಿದೆ. ಈ ಸಿನಿಮಾದಲ್ಲಿ ಭಾವನಾ ಮೆನನ್ ಅವರು ಶಿವರಾಜ್ಕುಮಾರ್ಗೆ ಜೋಡಿಯಾಗಿ ನಟಿಸಿದ್ದಾರೆ. ಮಂಜು ಪಾವಗಡ, ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಪೋಸ್ಟರ್ಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿವೆ.
ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಅ.1ರಿಂದ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಸ್ಟಾರ್ ಸಿನಿಮಾಗಳೆಲ್ಲ ಸಾಲು ಸಾಲಾಗಿ ಬಿಡುಗಡೆ ಆಗಲಿವೆ. ‘ಭಜರಂಗಿ 2’ ಮಾತ್ರವಲ್ಲದೇ, ದುನಿಯಾ ವಿಜಯ್ ನಟನೆಯ ‘ಸಲಗ’, ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಗಳು ಕೂಡ ಅಕ್ಟೋಬರ್ನಲ್ಲೇ ತೆರೆಕಾಣಲಿವೆ.
ಇದನ್ನೂ ಓದಿ:
ಶಿವರಾಜ್ಕುಮಾರ್ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ