ಶಿವರಾಜ್ಕುಮಾರ್ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ
Nee Sigovaregu: ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ನೀ ಸಿಗೋವರೆಗೂ’ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಹಲವು ಸಿನಿಮಾಗಳಲ್ಲಿ ಶಿವರಾಜ್ಕುಮಾರ್ (Shivarajkumar) ಬ್ಯುಸಿ ಆಗಿದ್ದಾರೆ. ಬೈರಾಗಿ, ವೇದಾ ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಶಿವಣ್ಣ ಅಭಿನಯಿಸಿರುವ ‘ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈಗ ಅವರ 124ನೇ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ರಾಮ್ ಧುಳಿಪುಡಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಕೂಡ ಬಹಿರಂಗ ಈಗ ಆಗಿದೆ. ‘ನೀ ಸಿಗೋವರೆಗೂ’ (Nee Sigovaregu) ಎಂದು ಅಪ್ಪಟ ಕನ್ನಡದ ಶೀರ್ಷಿಕೆಯನ್ನು ಇಡಲಾಗಿದೆ. ಇದು ಶಿವರಾಜ್ಕುಮಾರ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಮಂಗಳವಾರ (ಆ.17) ಮುಂಜಾನೆಯೇ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ನೀ ಸಿಗೋವರೆಗೂ’ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಶೀರ್ಷಿಕೆ ಫಲಕ, ಕ್ಲ್ಯಾಪ್ ಬೋರ್ಡ್, ಕ್ಯಾಮೆರಾಗೆ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಮೊದಲ ದೃಶ್ಯಕ್ಕೆ ಕಿಚ್ಚ ಸುದೀಪ್ ಕ್ಲ್ಯಾಪ್ ಮಾಡಿದರು.
ಬಾಲ ಶ್ರೀರಾಮ ಸ್ಟುಡಿಯೋಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣ ಆಗಲಿದೆ. ಈ ಸಿನಿಮಾದಲ್ಲಿ ಶಿವಣ್ಣ ಎರಡು ಡಿಫರೆಂಟ್ ಲುಕ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಕಾರಣದಿಂದಲೂ ‘ನೀ ಸಿಗೋವರೆಗೂ’ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಮೆರ್ಹೀನ್ ಪೀರ್ಜಾದಾ ಅವರು ‘ನೀ ಸಿಗೋವರೆಗೂ’ ಚಿತ್ರಕ್ಕೆ ನಾಯಕಿ. ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಾರಾಗಣದ ಕಾರಣದಿಂದಲೂ ಈ ಚಿತ್ರ ಹೈಪ್ ಪಡೆದುಕೊಂಡಿದೆ. ನಾಸರ್, ಸಂಪತ್, ಸಾಧುಕೋಕಿಲ ಮುಂತಾದವರು ನಟಿಸಲಿದ್ದಾರೆ. ಆ.18ರಿಂದಲೇ ಈ ಸಿನಿಮಾ ಚಿತ್ರೀಕರಣ ಆರಂಭ ಆಗಲಿದೆ. ‘ಟಗರು’ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ ಹಾಗೂ ಛಾಯಾಗ್ರಹಣ ಮಾಡಿದ್ದ ಮಹೇಂದ್ರ ಸಿಂಹ ಅವರು ‘ನೀ ಸಿಗುವವರೆಗೂ’ ಚಿತ್ರದಲ್ಲೂ ಮುಂದುವರಿಯುತ್ತಿದ್ದಾರೆ.
ಇದನ್ನೂ ಓದಿ:
ಶಿವರಾಜ್ಕುಮಾರ್ ಮನೆ ಮುಂದೆ ನಿಂತು ಮನದ ಮಾತು ಹಂಚಿಕೊಂಡ ಬಿಗ್ ಬಾಸ್ ವಿನ್ನರ್ ಮಂಜು