ಯಶ್ ಮುಂದಿನ ಸಿನಿಮಾಕ್ಕೆ ಇಬ್ಬರು ಸ್ಟಾರ್ ನಟಿಯರ ಎಂಟ್ರಿ

|

Updated on: Mar 19, 2024 | 4:06 PM

Yash: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ತಂಡವನ್ನು ಇಬ್ಬರು ಸ್ಟಾರ್ ನಟಿಯರು ಸೇರಿಕೊಂಡಿದ್ದಾರೆ. ಯಾರು ಆ ಇಬ್ಬರು?

ಯಶ್ ಮುಂದಿನ ಸಿನಿಮಾಕ್ಕೆ ಇಬ್ಬರು ಸ್ಟಾರ್ ನಟಿಯರ ಎಂಟ್ರಿ
Follow us on

ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಯಶ್ ಗೋವಾನಲ್ಲಿ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಇನ್ಯಾವ ನಟ-ನಟಿಯರು ಇರಲಿದ್ದಾರೆ ಎಂಬ ಬಗ್ಗೆ ಕುತೂಹಲವಿದೆ. ಇತ್ತೀಚೆಗೆ ಹೊರ ಬಿದ್ದಿರುವ ಮಾಹಿತಿಯಂತೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುತ್ತಿದ್ದಾರಂತೆ. ತಾವು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಸ್ವತಃ ಕರೀನಾ ಕಪೂರ್ ಹೇಳಿಕೊಂಡಿದ್ದಾರೆ. ಆ ಸಿನಿಮಾ ‘ಟಾಕ್ಸಿಕ್’ ಆಗಿದೆ ಎಂಬುದು ಸದ್ಯಕ್ಕೆ ಹರಡಿರುವ ಗುಲ್ಲು. ಇದೀಗ ಕರೀನಾ ಜೊತೆಗೆ ಮತ್ತೊಬ್ಬ ಸ್ಟಾರ್ ನಟಿ ‘ಟಾಕ್ಸಿಕ್’ ಸಿನಿಮಾದ ಭಾಗವಾಗಿದ್ದಾರೆ.

‘ಸಲಾರ್’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಶ್ರುತಿ ಹಾಸನ್, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಹೀರೋ-ಹೀರೋಯಿನ್ ಎಂಬ ಸಿದ್ಧ ಸೂತ್ರ ಇಲ್ಲ ಎನ್ನಲಾಗುತ್ತಿದ್ದು, ಶ್ರುತಿ ಹಾಸನ್ ‘ಟಾಕ್ಸಿಕ್’ ಸಿನಿಮಾದ ಬಹಳ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಶ್ರುತಿ ಹಾಸನ್​ರ ಪಾತ್ರ ಸಿನಿಮಾಕ್ಕೆ ತಿರುವು ನೀಡುವ ಪಾತ್ರವಾಗಿರಲಿದೆಯಂತೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ‘ಟಾಕ್ಸಿಕ’ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಟೀಸರ್​ನಲ್ಲಿರುವುದು ಶ್ರುತಿ ಹಾಸನ್​ರ ದನಿ ಎನ್ನಲಾಗುತ್ತಿದ್ದು, ಶ್ರುತಿ ದನಿ ನೀಡಿರುವುದು ಮಾತ್ರವೇ ಅಲ್ಲದೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಗೋವಾದಲ್ಲಿ ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಯಶ್ ಬ್ಯುಸಿ; ಸೆಟ್​ ಫೋಟೋ, ವಿಡಿಯೋ ಲೀಕ್

ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟಿ, ನಿರ್ದೇಶಕಿ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಕಥೆ ‘ಗ್ಲೋಬಲ್ ಅಪೀಲ್’ ಹೊಂದಿದ್ದು, ಈ ಸಿನಿಮಾವನ್ನು ವಿಶ್ವದ ಸಿನಿಮಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತಿದೆ ಎನ್ನಲಾಗುತ್ತಿದೆ. ಯಶ್ ತಮ್ಮ ಜೀವನದ ಸುಮಾರು ನಾಲ್ಕುಕ್ಕೂ ಹೆಚ್ಚು ವರ್ಷಗಳನ್ನು ಈ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದಾರೆ. ಸಿನಿಮಾದ ಕತೆಯ ಆಯ್ಕೆ, ಲೊಕೇಶನ್ ಹುಡುಕಾಟ, ತಂತ್ರಜ್ಞರ ಹುಡುಕಾಟ, ಪಾತ್ರಕ್ಕೆ ತಯಾರಿ ಇನ್ನಿತರೆ ಕಾರ್ಯಗಳಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯಶ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೀಗ ಕೊನೆಗೂ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

2016ರ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾದ ಬಳಿಕ ಎಂಟು ವರ್ಷಗಳಲ್ಲಿ ಯಶ್ ನಟಿಸಿರುವುದು ಕೇವಲ ಎರಡು ಸಿನಿಮಾಗಳಲ್ಲಿ. ಅದು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’. ಇದೀಗ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಈ ಸಿನಿಮಾ 2025ರ ಏಪ್ರಿಲ್ 10ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್​ ನಿರ್ಮಾಣ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ