ಅಮೆಜಾನ್ ಇವೆಂಟ್ನಲ್ಲಿ ಕನ್ನಡ ಮತ್ತು ಕಾಂತಾರದ ಕಂಪು ಹರಡಿಸಿದ ರಿಷಬ್
Rishab Shetty: ಅಮೆಜಾನ್ ಪ್ರೈಂ ವಿಡಿಯೋ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ, ವೇದಿಕೆ ಮೇಲೆ ಕನ್ನಡ ಹಾಗೂ ‘ಕಾಂತಾರ’ದ ಕಂಪು ಹರಡಿದ್ದಾರೆ.
‘ಕಾಂತಾರ’ (Kantara) ಸಿನಿಮಾ ರಿಷಬ್ ಶೆಟ್ಟಿ (Rishab Shetty) ಅವರನ್ನು ಬಹು ಎತ್ತರಕ್ಕೆ ಏರಿಸಿದೆ. ಹಲವು ಅತ್ಯುತ್ತಮರ ಸಾಲಿನಲ್ಲಿ ರಿಷಬ್ರನ್ನು ‘ಕಾಂತಾರ’ ಸಿನಿಮಾ ನಿಲ್ಲಿಸಿದೆ. ‘ಕಾಂತಾರ’ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷಗಳಾಗುತ್ತಾ ಬಂದಿದೆ. ಆದರೆ ಈಗಲೂ ಅದರ ಹವಾ ಹಾಗೆಯೇ ಇದೆ. ನಿನ್ನೆಯಷ್ಟೆ ಅಮೆಜಾನ್ ಪ್ರೈಂ ವಿಡಿಯೋ ಮುಂಬೈನಲ್ಲಿ ಅದ್ಧೂರಿಯಾ ಕಾರ್ಯಕ್ರಮವೊಂದನ್ನು ಮಾಡಿದ್ದು, ‘ಕಾಂತಾರ 2’ ಸಿನಿಮಾ ತಮ್ಮದೇ ಒಟಿಟಿ ವೇದಿಕೆಯಲ್ಲಿ ಪ್ರಸಾರಗೊಳ್ಳಲಿರುವ ಸುದ್ದಿ ಪ್ರಕಟಿಸಿದೆ. ಹಲವು ಚಿತ್ರರಂಗಗಳ ದೊಡ್ಡ ಸ್ಟಾರ್ಗಳು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಭಾಗಿಯಾಗಿದ್ದು, ವೇದಿಕೆ ಮೇಲೆ ಕನ್ನಡದ ಕಂಪು ಹರಿಸಿದ್ದು ವಿಶೇಷವಾಗಿತ್ತು.
ರಿಷಬ್ ಶೆಟ್ಟಿ ವೇದಿಕೆಗೆ ಬರುವ ಮುಂಚೆಯೇ ‘ಕಾಂತಾರ’ ಸಿನಿಮಾದ ವರಾಹ ರೂಪಂ ಹಾಡಿಗೆ ಯಕ್ಷಗಾನ ಪ್ರದರ್ಶನ ನಡೆಯಿತು. ಬಳಿಕ ಅಮೆಜಾನ್ ಭಾರತದ ಆಡಳಿತ ವರ್ಗದ ಮುಖ್ಯಸ್ಥ ಹಾಗೂ ಬಾಲಿವುಡ್ ನಟ ವರುಣ್ ಧವನ್ ಅವರುಗಳು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಗ್ರೂಪ್ನ ಸಹ ಸಂಸ್ಥಾಪಕ, ನಿರ್ಮಾಪಕ ಚೆಲುವೆ ಗೌಡ ಅವರುಗಳನ್ನು ವೇದಿಕೆಗೆ ಬರಮಾಡಿಕೊಂಡರು.
‘ಎಲ್ಲರಿಗೂ ನಮಸ್ಕಾರ’ ಎನ್ನುತ್ತಾ ಕನ್ನಡದಲ್ಲಿಯೇ ಮಾತು ಆರಂಭಿಸಿದ ರಿಷಬ್ ಶೆಟ್ಟಿ, ‘ನಾನು ನಟನೆಯನ್ನು ಆರಂಭಿಸಿದ್ದು ಯಕ್ಷಗಾನದಿಂದಲೇ ಆರಂಭಿಸಿದ್ದೆ. ನಮ್ಮ ಊರಿನ ಜನಪದ ಕತೆಗಳನ್ನು ಹೇಳುವ ಹಂಬಲ ನನಗೆ ಬಹಳ ಮೊದಲಿನಿಂದಲೂ ಇತ್ತು. ನಾನು ದ್ವಿತೀಯ ಪಿಯುಸಿ ಓದುವಾಗಲೇ ನನ್ನ ತಲೆಯಲ್ಲಿ ‘ಕಾಂತಾರ’ ಸಿನಿಮಾದ ಎರಡು ಭಾಗಗಳ ಕತೆ ಇತ್ತು. ಅದಾದ ಬಳಿಕ ನಾನು ಫಿಲಂ ಮೇಕರ್ ಆದ ನಂತರ ಚಿತ್ರಕತೆ ಬರೆದುಕೊಂಡೆ. ಆ ಬಳಿಕ ನನಗೆ ಹೊಂಬಾಳೆ ಸಿಕ್ತು, ಅದು ನನ್ನ ಸೌಭಾಗ್ಯ’ ಎಂದಿದ್ದಾರೆ ರಿಷಬ್.
ಇದನ್ನೂ ಓದಿ:‘ಕಾಂತಾರ’ ಬಳಿಕ ಮತ್ತೆ ತಾಯಿ ಪಾತ್ರ ಮಾಡಿದ ಮಾನಸಿ ಸುಧೀರ್; ಆದರೆ ಒಂದು ಟ್ವಿಸ್ಟ್
‘ನಾವು ‘ಕಾಂತಾರ’ ಸಿನಿಮಾದ ಚಿತ್ರೀಕರಣ ಮಾಡುವಾಗಲೇ ನಾವು ಇದರ ಸೀಕ್ವೆಲ್ ಮಾಡುವ ಬಗ್ಗೆ ಯೋಜಿಸಿದ್ದೆವು. ಇನ್ನು ‘ಕಾಂತಾರ’ ಸಿನಿಮಾ ಬಿಡುಗಡೆ ಆದ ಬಳಿಕ ಭಾರತದ ಪ್ರೇಕ್ಷಕರು ಆ ಸಿನಿಮಾಕ್ಕೆ ಕೊಟ್ಟ ಗೌರವ ಬಹಳ ದೊಡ್ಡದು. ಅದು ನನ್ನ ಪುಣ್ಯವೆಂದೇ ನಾನು ಭಾವಿಸಿದ್ದೀನಿ. ಸದ್ಯಕ್ಕೆ ‘ಕಾಂತಾರ 2’ಗಾಗಿ ನಮ್ಮ ಊರಿನ ಬಳಿಯೇ ದೊಡ್ಡದಾದ ಸೆಟ್ ನಿರ್ಮಾಣ ಮಾಡಿದ್ದೇವೆ. ಮುಂದಿನ ತಿಂಗಳಿನಿಂದ ನಾವು ಚಿತ್ರೀಕರಣ ಮಾಡಲಿದ್ದೇವೆ’ ಎಂದಿದ್ದಾರೆ.
ಇನ್ನು ಹೊಂಬಾಳೆ ಫಿಲ್ಮ್ಸ್ನ ಸಹ ನಿರ್ಮಾಪಕ ಆಗಿರುವ ಚೆಲುವೇ ಗೌಡ ಮಾತನಾಡಿ, ‘ನಾವು ‘ಕಾಂತಾರ’ ಅಥವಾ ಇನ್ಯಾವುದೇ ಕತೆಯನ್ನು ನಾವು ಆಯ್ಕೆ ಮಾಡುವಾಗ ನಾವು ಪ್ರೇಕ್ಷಕರಿಗೆ ಏನು ಭಿನ್ನವಾಗಿ ನೀಡುತ್ತಿದ್ದೇವೆ ಎಂಬುದನ್ನು ನೋಡುತ್ತೇವೆ. ನಾವು ‘ಕಾಂತಾರ’ ಕತೆ ಕೇಳಿದಾಗ, ಇದು ನೆಲದ ಕತೆ ಅದರಲ್ಲಿಯೂ ಕರಾವಳಿ ಭಾಗದ ಸಂಸ್ಕೃತಿಯ ಎಂಬುದನ್ನು ಗುರುತಿಸಿದೆವು. ಆ ಕತೆಯನ್ನು ದೊಡ್ಡ ಸಂಖ್ಯೆಯ ಅಥವಾ ಇತರೆ ಭಾಗದ ಜನರಿಗೆ ತೋರಿಸುವ ಉದ್ದೇಶದಿಂದ ಆ ಪ್ರಾಜೆಕ್ಟ್ ಮೇಲೆ ಬಂಡವಾಳ ತೊಡಗಿಸಿದೆವು. ಯಾವುದು ಹೆಚ್ಚು ಪ್ರಾದೇಶಿಕವೋ ಅದೇ ಹೆಚ್ಚು ವಿಶ್ವಮಾನ್ಯ ಎಂಬುದು ನಮ್ಮ ಹಾಗೂ ರಿಷಬ್ರ ನಂಬಿಕೆ’ ಎಂದಿದ್ದಾರೆ.
‘ಕಾಂತಾರ’ ಸಿನಿಮಾ ಈಗಾಗಲೇ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಂ ಆಗುತ್ತಿದೆ. ‘ಕಾಂತಾರ 2’ ಸಹ ಅಮೆಜಾನ್ ಪ್ರೈಂನಲ್ಲಿಯೇ ಸ್ಟ್ರೀಮ್ ಆಗಲಿದೆ. ‘ಕಾಂತಾರ’ ಮಾತ್ರವೇ ಅಲ್ಲದೆ ತೆಲುಗು, ತಮಿಳು ಹಾಗೂ ಹಿಂದಿಯ ಹಲವು ದೊಡ್ಡ ಬಜೆಟ್ನ ಸಿನಿಮಾಗಳನ್ನು ಇನ್ನೂ ಬಿಡುಗಡೆ ಆಗುವ ಮುಂಚೆಯೇ ಅಮೆಜಾನ್ ಪ್ರೈಂ ವಿಡಿಯೋ ಖರೀದಿ ಮಾಡಿ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ