ಬಿಡುಗಡೆಗೆ ಸಜ್ಜಾಯಿತು ‘ಸಿಗ್ನಲ್​ ಮ್ಯಾನ್​ 1971’ ಸಿನಿಮಾ; ಏನಿದರ ಕಥೆ?

|

Updated on: Jun 14, 2024 | 10:22 PM

ಈಗಾಗಲೇ ಹಲವು ಸಿನಿಮೋತ್ಸವಗಳಲ್ಲಿ ‘ಸಿಗ್ನಲ್​ ಮ್ಯಾನ್​ 1971’ ಚಿತ್ರ ಪ್ರದರ್ಶನ ಕಂಡಿದೆ. ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ವೆಂಕಟೇಶ್ ಪ್ರಸಾದ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕೆ. ಶಿವರುದ್ರಯ್ಯ ಅವರು ನಿರ್ದೇಶನ ಮಾಡಿದ್ದು, ಗಣೇಶ್ ಪ್ರಭು ಬಿ.ವಿ. ಬಂಡವಾಳ ಹೂಡಿದ್ದಾರೆ. ಆಗಸ್ಟ್​ನಲ್ಲಿ ‘ಸಿಗ್ನಲ್​ ಮ್ಯಾನ್​ 1971’ ರಿಲೀಸ್​ ಆಗಲಿದೆ.

ಬಿಡುಗಡೆಗೆ ಸಜ್ಜಾಯಿತು ‘ಸಿಗ್ನಲ್​ ಮ್ಯಾನ್​ 1971’ ಸಿನಿಮಾ; ಏನಿದರ ಕಥೆ?
‘ಸಿಗ್ನಲ್​ ಮ್ಯಾನ್​ 1971’ ಚಿತ್ರತಂಡ
Follow us on

ಆಗಸ್ಟ್​ನಲ್ಲಿ ಅನೇಕ ಸಿನಿಮಾಗಳು (Kannada Cinema) ಬಿಡುಗಡೆ ಆಗಲಿದೆ. ಕನ್ನಡದ ‘ಸಿಗ್ನಲ್​ ಮ್ಯಾನ್​ 1971’ (Signalman 1971) ಸಿನಿಮಾ ಕೂಡ ಆಗಸ್ಟ್​ನಲ್ಲಿಯೇ ತೆರೆಕಾಣಲಿದೆ. ‘ಹಿಂದೂಸ್ಥಾನ್ ಮುಕ್ತ ಮೀಡಿಯಾ ಎಂಟರ್ ಟೈನರ್’ ಮೂಲಕ ಗಣೇಶ್ ಪ್ರಭು ಬಿ.ವಿ. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಕೆ. ಶಿವರುದ್ರಯ್ಯ ಅವರು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ (Prakash Belawadi), ವೆಂಕಟೇಶ್ ಪ್ರಸಾದ್ ಮುಂತಾದವರು ಅಭಿನಯಿಸಿದ್ದಾರೆ. ಇತ್ತೀಚೆಗೆ ‘ಸಿಗ್ನಲ್ ಮ್ಯಾನ್ 1971’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಯಿತು.

ನಿರ್ದೇಶಕ ಕೆ. ಶಿವರುದ್ರಯ್ಯ ಅವರು ಸಿನಿಮಾದ ಕಾನ್ಸೆಪ್ಟ್​ ಬಗ್ಗೆ ಮಾತಾಡಿದರು. ‘1971ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯನ್ನು ಈ ಸಿನಿಮಾದ ಕಥೆ ಇದೆ. ಯಾರೂ ಇಳಿಯದ, ಹತ್ತದ ಒಂದು ರೈಲ್ವೇ ನಿಲ್ದಾಣದಲ್ಲಿ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸುವ ಸಿಗ್ನಲ್ ಮ್ಯಾನ್ ಒಬ್ಬನ ಬದುಕಿನ ಕಥೆಯೂ ಈ ಸಿನಿಮಾದಲ್ಲಿ ಇದೆ. 20 ವರ್ಷ ಜನಸಂಪರ್ಕವಿಲ್ಲದ ಸ್ಥಳದಲ್ಲಿದ್ದ ಆತನಿಗೆ ಗೊಂದಲ ಮೂಡುತ್ತದೆ. ಆ ಗೊಂದಲದಿಂದ ಹೊರಬಂದ ಬಳಿಕ ಅವನು ರಾಜ್ಯ ಮತ್ತು ರಾಷ್ಟ್ರಕ್ಕೆ ಬೇಕಾಗುವ ವ್ಯಕ್ತಿ ಆಗುತ್ತಾನೆ. ಈ ಪಾತ್ರದಲ್ಲಿ ನಟ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ’ ಎಂದು ನಿರ್ದೇಶಕರು ಹೇಳಿದರು.

‘ಸಿಗ್ನಲ್​ ಮ್ಯಾನ್​ 1971’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಊಟಿಯಲ್ಲಿ ಹಾಕಲಾಗಿದ್ದ ರೈಲ್ವೆ ನಿಲ್ದಾಣದ ಸೆಟ್​ ಮಾಡಲಾಗಿದೆ. ಗಣೇಶ್ ಪ್ರಭು ಅವರ ನಿರ್ಮಾಣ, ಶೇಖರ್ ಚಂದ್ರು ಅವರ ಛಾಯಾಗ್ರಹಣ, ಸಂತೋಷ್ ಪಾಂಚಾಲ್ ಅವರ ಕಲಾ ನಿರ್ದೇಶನ, ಸುರೇಶ್ ಅರಸ್ ಅವರ ಸಂಕಲನ ಹಾಗೂ ಒಸೆಪಚ್ಚನ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.

ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿದ ಪ್ರಕಾಶ್ ಬೆಳವಾಡಿ; ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ನಟ ಹೇಳಿದ್ದೇನು?

ನಿರ್ಮಾಪಕ ಗಣೇಶ್ ಪ್ರಭು ಮಾತನಾಡಿ, ‘ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಮೊದಲ ಸಿನಿಮಾ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ತಂಡದವರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಆಗಸ್ಟ್​ನಲ್ಲಿ ಸಿನಿಮಾವನ್ನು ರಿಲೀಸ್​ ಮಾಡುತ್ತೇವೆ‌. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ನಾನು ಹೋಗಿದ್ದೆ.‌ ಆ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಂದಿದೆ’ ಎಂದು ಅವರು ಖುಷಿ ಹಂಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.