AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗೀತಂ ಶ್ರೀನಿವಾಸ ರಾವ್ ನಿಧನಕ್ಕೆ ಸಂತಾಪ ಸೂಚಿಸಿದ ಚಿರಂಜೀವಿ, ಎನ್​ಟಿಆರ್

ದಕ್ಷಿಣ ಭಾರತ ಚಿತ್ರರಂಗದ ಲೆಜೆಂಡರಿ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ, ಆಪ್ತರಿಗೆ ಹಾಗೂ ಸೆಲೆಬ್ರಿಟಿಗಳಿಗೆ ನೋವಾಗಿದೆ. ಮೆಗಾ ಸ್ಟಾರ್ ಚಿರಂಜೀವಿ, ಜೂನಿಯರ್ ಎನ್​ಟಿಆರ್, ವಿಷ್ಣು ಮಂಜು, ದೇವಿ ಶ್ರೀ ಪ್ರಸಾದ್ ಸೇರಿದಂತೆ ಅನೇಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸಿಂಗೀತಂ ಶ್ರೀನಿವಾಸ ರಾವ್ ನಿಧನಕ್ಕೆ ಸಂತಾಪ ಸೂಚಿಸಿದ ಚಿರಂಜೀವಿ, ಎನ್​ಟಿಆರ್
Singeetham Srinivasa Rao, Chiranjeevi, Jr Ntr
ಮದನ್​ ಕುಮಾರ್​
|

Updated on: Oct 04, 2026 | 10:28 AM

Share

ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿಧನರಾಗಿದ್ದು, ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ. ಚಿತ್ರರಂಗಕ್ಕೆ ಸಿಂಗೀತಂ ಶ್ರೀನಿವಾಸ ರಾವ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಭಾಷೆಯ ಸಿನಿಮಾಗಳಿಗೆ ನಿರ್ದೇಶನ ಮಾಡುವ ಮೂಲಕ ಸಿಂಗೀತಂ ಶ್ರೀನಿವಾಸ ರಾವ್ ಅವರು ತಮ್ಮದೇ ಛಾಪು ಮೂಡಿಸಿದ್ದರು. ಅವರ ನಿಧನಕ್ಕೆ ಮೆಗಾ ಸ್ಟಾರ್ ಚಿರಂಜೀವಿ, ಜೂನಿಯರ್ ಎನ್ಟಿಆರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

‘ಸಿಂಗೀತಂ ಶ್ರೀನಿವಾಸ ರಾವ್ ಅವರು ಇನ್ನಿಲ್ಲ ಎಂಬ ಸುದ್ದಿ ಅತ್ಯಂತ ದುಃಖಕರವಾದದ್ದು. ಆದಿತ್ಯ 369, ಪುಷ್ಪಕ ವಿಮಾನಂ, ಮಯೂರಿ.. ಕಾಲಕ್ಕಿಂತ ಮುಂಚಿತವಾಗಿಯೇ ಆಲೋಚಿಸಿ, ತಲೆಮಾರುಗಳು ಬದಲಾದರೂ ಸದಾ ಹೊಸತಾಗಿ ಕಾಣುವ ಸಿನಿಮಾಗಳನ್ನು ನೀಡಿದ ಮಹಾನ್ ದೂರದರ್ಶಿ. ಅವರ ಕುಟುಂಬದ ಸದಸ್ಯರಿಗೆ ನನ್ನ ಭಾವಪೂರ್ಣ ಸಂತಾಪಗಳು’ ಎಂದು ಜೂನಿಯರ್​ ಎನ್​ಟಿಆರ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರ ಅಗಲಿಕೆ ತೀವ್ರ ದುಃಖ ತಂದಿದೆ. ಅವರ ಕಲ್ಪನಾ ಶಕ್ತಿ ಮತ್ತು ಹೊಸ ಆಲೋಚನೆಗಳನ್ನು ಪ್ರಯೋಗಿಸುವ ಧೈರ್ಯವು ಭಾರತೀಯ ಚಿತ್ರರಂಗಕ್ಕೆ ಎಂದಿಗೂ ಮರೆಯಲಾಗದ ಹಲವು ಅದ್ಭುತ ಸಿನಿಮಾಗಳನ್ನು ನೀಡಿದೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಅಪಾರ ಗೌರವ ಮತ್ತು ಪ್ರೀತಿಯಿಂದ ಸ್ಮರಿಸಲಾಗುತ್ತದೆ’ ಎಂದು ಜಿರಂಜೀವಿ ಪೋಸ್ಟ್ ಮಾಡಿದ್ದಾರೆ.

‘ಸಿಂಗೀತಂ ಶ್ರೀನಿವಾಸ ರಾವ್ ಇತ್ತೀಚಿನ ಸಿನಿಮಾ ‘ಸಿಂಗ್ ಗೀತಂ’ ಕಥೆ ಹೇಳುವಿಕೆಯ ಮೇಲಿದ್ದ ಅವರ ಎಂದಿಗೂ ಕುಗ್ಗದ ಒಲವಿಗೆ ಒಂದು ಸುಂದರ ಸಾಕ್ಷಿಯಾಗಿತ್ತು. ಮನಸ್ಸಿನಿಂದ ಅವರು ಕೊನೆಯವರೆಗೂ ಸದಾ ಯುವಕರಾಗಿಯೇ, ಕುತೂಹಲದಿಂದ ಹಾಗೂ ಹೊಸತನ್ನು ಸೃಷ್ಟಿಸುವ ಉತ್ಸಾಹದಲ್ಲಿದ್ದರು. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಸಿನಿಮಾಗಳು ಯುಗಯುಗಾಂತರಗಳ ಕಾಲ ಮಾತನಾಡುತ್ತಲೇ ಇರುತ್ತವೆ’ ಎಂದು ಚಿರಂಜೀವಿ ಅವರು ಪೋಸ್ಟ್ ಮಾಡಿದ್ದಾರೆ.

ವಿಷ್ಣು ಮಂಚು ಅವರು ದೀರ್ಘ ಬರಹ ಹಂಚಿಕೊಂಡಿದ್ದಾರೆ. ‘ಈ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವುಂಟುಮಾಡಿದೆ. ನಾನು ಬೆಳೆಯುವಾಗ ಸಿಂಗೀತಂ ಶ್ರೀನಿವಾಸರಾವ್ ಅವರು ನನ್ನಿಷ್ಟದ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಸಿನಿಮಾದ ಹಿಂದಿರುವ ತಾಂತ್ರಿಕತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ವಯಸ್ಸಿಗಿಂತ ಮುಂಚೆಯೇ, ಅವರ ಸಿನಿಮಾಗಳನ್ನು ಒಂದು ರೀತಿಯ ವಿಸ್ಮಯದಿಂದ ನೋಡುತ್ತಿದ್ದೆ. ಬೆಳೆದು, ನಾನು ಕೂಡ ಚಿತ್ರರಂಗದ ಭಾಗವಾದಂತೆ, ಅವರ ಮೇಲಿದ್ದ ನನ್ನ ಅಭಿಮಾನ ಮತ್ತು ಗೌರವ ಇನ್ನಷ್ಟು ಹೆಚ್ಚಾಯಿತು’ ಎಂದು ವಿಷ್ಣು ಮಂಚು ಹೇಳಿದ್ದಾರೆ.

ಇದನ್ನೂ ಓದಿ: ಸಿಂಗೀತಂ ಶ್ರೀನಿವಾಸ ರಾವ್ ನಿಧನ: ಅಣ್ಣಾವ್ರ ಜತೆ ಐಕಾನಿಕ್ ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ

‘ಅವರು ಸಿನಿಮಾವನ್ನು ಅಪಾರವಾಗಿ ಪ್ರೀತಿಸಿದ ಪ್ರೇಮಿ. ಕಲ್ಪನಾ ಶಕ್ತಿಯಲ್ಲಿ ನಿರಂತರ ಭಯರಹಿತರಾಗಿದ್ದ ಅವರು, ಹೊಸ ಪ್ರಯೋಗಗಳನ್ನು ಮಾಡುತ್ತಾ, ಯಾವುದೇ ಒಂದು ಶೈಲಿ ಅಥವಾ ಚೌಕಟ್ಟಿಗೆ ಎಂದಿಗೂ ಬಂಧಿಯಾಗಲಿಲ್ಲ. ಅವರು ನಿರ್ದೇಶಿಸಿದ ಪ್ರತಿಯೊಂದು ಸಿನಿಮಾವೂ ನಮಗೇನನ್ನೋ ಕಲಿಸುತ್ತದೆ. ಪ್ರತಿಯೊಂದು ಚಿತ್ರವೂ ಒಂದು ಪಠ್ಯಪುಸ್ತಕದಂತೆ. ನನಗೆ, ಸಿನಿಮಾದ ಆ ಮಾಂತ್ರಿಕತೆಯನ್ನು ಪ್ರೀತಿಸುವಂತೆ ಮಾಡಿದ ನಿರ್ದೇಶಕರಲ್ಲಿ ಅವರು ಎಂದಿಗೂ ಮುಂಚೂಣಿಯಲ್ಲಿರುತ್ತಾರೆ. ನಾವು ಒಬ್ಬ ಮಹಾನ್ ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಸಿನಿಮಾಗಳು ಸದಾ ಜೀವಂತವಾಗಿರುತ್ತವೆ ಮತ್ತು ಮುಂಬರುವ ತಲೆಮಾರುಗಳಿಗೆ ಸ್ಪೂರ್ತಿ ನೀಡುತ್ತಲೇ ಇರುತ್ತವೆ’ ಎಂದು ವಿಷ್ಣು ಮಂಚು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More