ಮುಂಬೈ: ಕೊರೊನಾ ಲಾಕ್ಡೌನ್ ವೇಳೆಯಲ್ಲಿ ಹಲವಾರು ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ್ದ ಬಹುಭಾಷಾ ನಟ ಸೋನು ಸೂದ್ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಇದಲ್ಲದೆ, ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ಮಂದಿಗೂ ಸಹಾಯದ ಹಸ್ತ ಚಾಚಿದ್ದರು. ಇದೀಗ, ಈ ನಟ ಮತ್ತೊಮ್ಮೆ ವಲಸೆ ಕಾರ್ಮಿಕರ ಆಪದ್ಬಾಂಧವರಾಗಿದ್ದಾರೆ.
ಶನಿವಾರ ಗಣೇಶನ ಹಬ್ಬ. ಹೀಗಾಗಿ, ಮಹಾರಾಷ್ಟ್ರದ ಬೇರೆ ಭಾಗಗಳಿಂದ ಬಂದು ಮುಂಬೈನಲ್ಲಿ ನೆಲೆಸಿದ್ದ ಸುಮಾರು 300- 500 ವಲಸೆ ಕಾರ್ಮಿಕರನ್ನ ಹಬ್ಬದ ಪ್ರಯುಕ್ತವಾಗಿ ತಮ್ಮ ಊರುಗಳಿಗೆ ತೆರಳಲು ಸೋನು ಸೂದ್ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡ ಸೋನು ಕಳೆದ ಕೆಲವು ದಿನಗಳ ಹಿಂದೆ ಪ್ರಭಾದೇವಿಯ ಬಳಿ ಇರುವ ಸಿದ್ಧಿವಿನಾಯಕ ದೇವಸ್ಥಾನದ ಹಿಂದೆ ವಾಸವಿರುವ ವಲಸೆ ಕಾರ್ಮಿಕರು ನನ್ನನ್ನು ಭೇಟಿ ಮಾಡಿ ಬಸ್ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿದ್ದರು. ಹಾಗಾಗಿ, ನಾನು ಅವರಿಗೆಲ್ಲಾ ಬಸ್ ವ್ಯವಸ್ಥೆ ಮಾಡಿಕೊಟ್ಟೆ ಎಂದು ಹೇಳಿದ್ದಾರೆ.
ಬರೀ ಇದೇ ಅಲ್ಲ, ಲಾಕ್ಡೌನ್ ವೇಳೆಯಲ್ಲಿ ಸೋನು ಸುಮಾರು 1 ಲಕ್ಷ ಜನರಿಗೆ ಉದ್ಯೋಗಾವಕಾಶ ಸಹ ಮಾಡಿಕೊಟ್ಟಿದ್ದಾರಂತೆ. ಸೋನು ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.