ಬ್ಯಾಂಕಾಕ್​ನಿಂದ ಸ್ಪಂದನಾ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಸಿದ್ಧತೆ; ಅಂತಿಮ ದರ್ಶನಕ್ಕೆ ಅವಕಾಶ

| Updated By: ರಾಜೇಶ್ ದುಗ್ಗುಮನೆ

Updated on: Aug 08, 2023 | 9:53 AM

ಕಾನೂನು ಪ್ರಕ್ರಿಯೆ ಮಧ್ಯಾಹ್ನದ ಒಳಗೆ ಮುಗಿದರೆ ಮಧ್ಯಾಹ್ನ ಎರಡು ಗಂಟೆಗೆ ಇರುವ ಬ್ಯಾಂಕಾಕ್​-ಬೆಂಗಳೂರು ಇಂಡಿಗೋ ಫ್ಲೈಟ್ ಮೂಲಕ ಸ್ಪಂದನಾ ಮೃತದೇಹವನ್ನು ತರಲಾಗುತ್ತದೆ.

ಬ್ಯಾಂಕಾಕ್​ನಿಂದ ಸ್ಪಂದನಾ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಸಿದ್ಧತೆ; ಅಂತಿಮ ದರ್ಶನಕ್ಕೆ ಅವಕಾಶ
ವಿಜಯ್-ಸ್ಪಂದನಾ
Follow us on

ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅವರು ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಸಣ್ಣ ವಯಸ್ಸಲ್ಲಿ ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್​ ತಂದಿದೆ. ಸದ್ಯ ವಿಜಯ್ ರಾಘವೇಂದ್ರ ಹಾಗೂ ಕುಟುಂಬ ಬ್ಯಾಂಕಾಕ್​​ನಲ್ಲೇ ಇದೆ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಇಂದು (ಆಗಸ್ಟ್ 8) ಸಂಜೆ ಅಥವಾ ರಾತ್ರಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.

ಸ್ಪಂದನಾ ಅವರಿಗೆ ಆಗಸ್ಟ್ 6ರಂದು ಹೃದಯಾಘಾತ ಆಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಸೋಮವಾರ (ಆಗಸ್ಟ್ 7) ಮರಣೋತ್ತರ ಪರೀಕ್ಷೆ ನಡೆದಿದೆ. ಬೇರೆ ದೇಶದ ವ್ಯಕ್ತಿ ಬಾಂಕಾಕ್​​ನಲ್ಲಿ ಮೃತಪಟ್ಟರೆ ಅದನ್ನು ತೆಗೆದುಕೊಂಡು ಹೋಗಲು ಒಂದಷ್ಟು ಕಾನೂನು ಪ್ರಕ್ರಿಯೆಗಳು ಇವೆ. ಅದನ್ನು ಕುಟುಂಬದವರು ಇಂದು ಬೆಳಿಗ್ಗೆ ಪೂರ್ಣಗೊಳಿಸಲಿದ್ದಾರೆ.

ಕಾನೂನು ಪ್ರಕ್ರಿಯೆ ಮಧ್ಯಾಹ್ನದ ಒಳಗೆ ಮುಗಿದರೆ ಮಧ್ಯಾಹ್ನ ಎರಡು ಗಂಟೆಗೆ ಇರುವ ಬ್ಯಾಂಕಾಕ್​-ಬೆಂಗಳೂರು ಇಂಡಿಗೋ ಫ್ಲೈಟ್ ಮೂಲಕ ಸ್ಪಂದನಾ ಮೃತದೇಹವನ್ನು ತರಲಾಗುತ್ತದೆ. ಹಾಗಾದಲ್ಲಿ ಸಂಜೆ 6 ಘಂಟೆಗೆ ಬೆಂಗಳೂರಿಗೆ ಕುಟುಂಬ ಬರಲಿದೆ. ಒಂದೊಮ್ಮೆ ವಿಳಂಬ ಆದರೆ, ಬ್ಯಾಂಕಾಕ್​ನಿಂದ ಬೆಂಗಳೂರಿಗೆ ರಾತ್ರಿ 9:30ಕ್ಕೆ ಥೈ ಏರ್​​ಲೈನ್ಸ್ ವಿಮಾನ ಇದೆ. ಹಾಗಾದಲ್ಲಿ ಪಾರ್ಥಿವ ಶರೀರ ತರುವುದು ಮಧ್ಯರಾತ್ರಿ ಆಗಲಿದೆ.

ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈಗಾಗಲೇ ಸ್ಪಂದನಾ ಮೃತಪಟ್ಟು ಹಲವು ಗಂಟೆಗಳು ಕಳೆದಿವೆ. ಹೀಗಾಗಿ, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದೊಮ್ಮೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದರೆ ಮಲ್ಲೇಶ್ವರ ಮೈದಾನ ಅಥವಾ ಬಿಜೆಪಿ ಕಚೇರಿ ಎದುರಿನ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ‘ನಾನು ಮದುವೆಯಾದರೆ ಅವರನ್ನ;ಅಪ್ಪನನ್ನು ಒಪ್ಪಿಸಿ ಎಂದಿದ್ದಳು’; ಸ್ಪಂದನಾ ಬಗ್ಗೆ ನಿರ್ದೇಶಕಿ ಮಾತು

ಈಡಿಗ ಸಮುದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯಕ್ರಿಯೆಗೆ ಜಾಗ ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಬೆಂಗಳೂರು ಅಥವಾ ಬೆಳ್ತಂಗಡಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಪಾರ್ಥಿವ ಶರೀರ ಬಂದ ಬಳಿಕವೇ ನಿರ್ಧಾರ ಮಾಡಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:42 am, Tue, 8 August 23