ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ (Arjun Sarja) ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದರು. ಅವರಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಅವರು ಆರೋಪಿಸಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಶ್ರುತಿ ಹರಿಹರನ್ (Sruthi Hariharan) ಆರೋಪವನ್ನು ಕೆಲವರು ಟೀಕಿಸಿದರೆ ಇನ್ನೂ ಕೆಲವರು ನಟಿಯನ್ನು ಬೆಂಬಲಿಸಿದ್ದರು. ಮೂರು ವರ್ಷ ತನಿಖೆ ನಡೆಸಿದ್ದರೂ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸರು ಕೋರ್ಟ್ಗೆ ಬಿ-ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಇದನ್ನು ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದಾರೆ. ಈ ಪ್ರಕರಣ ನಡೆದು ಬಂದ ಹಾದಿ ಬಗ್ಗೆ ಇಲ್ಲಿದೆ ವಿವರ.
ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ‘ವಿಸ್ಮಯ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಅರುಣ್ ವೈದ್ಯನಾಥನ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರು ಗಂಡ-ಹೆಂಡತಿ ಪಾತ್ರ ಮಾಡಿದ್ದರು. ಈ ಚಿತ್ರದ ಶೂಟಿಂಗ್ 2015-16ರಲ್ಲಿ ನಡೆದಿತ್ತು. 2017ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.
2018ರಲ್ಲಿ ಮೀ ಟೂ ಆಂದೋಲನ ಆರಂಭ ಆಗಿತ್ತು. ಅನೇಕ ನಟಿಯರು ತಮಗಾದ ಕಹಿ ಅನುಭವ ಬಗ್ಗೆ ಹೇಳಿಕೊಂಡಿದ್ದರು. ಮಾಧ್ಯಮದ ಜೊತೆ ಮಾತನಾಡುತ್ತಾ ಶ್ರುತಿ ಹರಿಹರನ್ ಕೂಡ ತಮಗೂ ಲೈಂಗಿಕ ಕಿರುಕುಳ ಆಗಿತ್ತು ಎಂದಿದ್ದರು. ‘ವಿಸ್ಮಯ’ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ಮಾಡಿದ್ದರು ಎಂದು ಶ್ರುತಿ ಹರಿಹರನ್ ಆರೋಪ ಹೊರಿಸಿದರು. ಇದಾದ ಬಳಿಕ ಇಡೀ ಸ್ಯಾಂಡಲ್ವುಡ್ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು.
ಶ್ರುತಿ ಹಾಗೂ ಅರ್ಜುನ್ ಮಧ್ಯೆ ಸಂಧಾನ ಪ್ರಯತ್ನ ಕೂಡ ಆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು. ಅಂಬರೀಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಿ ಸಂಧಾನಕ್ಕೆ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಒಪ್ಪಿರಲಿಲ್ಲ.
ಶ್ರುತಿ ನೀಡಿದ ದೂರನ್ನು ಆಧರಿಸಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿತ್ತು. ಮೂರು ವರ್ಷ ತನಿಖೆಯೂ ನಡೆಯಿತು. ಆದರೆ, ಸಾಕ್ಷ್ಯ ಸಿಗದ ಕಾರಣ ಕಾರಣ 2021 ಡಿಸೆಂಬರ್ನಲ್ಲಿ ಕೋರ್ಟ್ಗೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು.
ಪ್ರಕರಣವೊಂದರ ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಅಗತ್ಯ ಇರುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅಂತಿಮ ವರದಿಯೇ ಬಿ ರಿಪೋರ್ಟ್.
ಇದನ್ನೂ ಓದಿ: Sruthi Hariharan: ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್; ಬಿ ರಿಪೋರ್ಟ್ ಚಾಲೆಂಜ್ ಮಾಡಿದ ಶ್ರುತಿ ಹರಿರಹರನ್ಗೆ ನೋಟಿಸ್
ಪೊಲೀಸರ ಬಿ ರಿಪೋರ್ಟ್ನ ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದಾರೆ. ಅವರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ನಿಂದ ನೋಟಿಸ್ ಜಾರಿ ಆಗಿದೆ. ಸಾಕ್ಷ್ಯ ಒದಗಿಸುವಂತೆ ಶ್ರುತಿಗೆ ಸೂಚಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ