ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಯಶಸ್ಸಿನ ಬೆನ್ನಲ್ಲೆ ಅವರಿಗೆ ವಿವಾದಗಳು ಸಹ ಸುತ್ತಿಕೊಂಡಿವೆ. ದರ್ಶನ್ ಅವರ ಪತ್ನಿ ಹಾಗೂ ಅವರ ಆಪ್ತರಾಗಿರುವ ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ಅದಾದ ಬೆನ್ನಲ್ಲೆ ದರ್ಶನ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಇಂದು ಇವಳಿರ್ತಾಳೆ, ನಾಳೆ ಅವಳಿರ್ತಾಳೆ’ ಎಂಬ ಮಾತುಗಳನ್ನು ಲಘುವಾಗಿ ಆಡಿದ್ದರು. ಅದಾದ ಬಳಿಕ ಬೇರೊಂದು ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧವೂ ಲಘುಪದ ಬಳಕೆ ಮಾಡಿದ್ದರು.
ಉಮಾಪತಿ ವಿರುದ್ಧ ದರ್ಶನ್ ಲಘು ಪದ ಬಳಕೆ ಮಾಡಿದ್ದನ್ನು ವಿರೋಧಿಸಿ ಕೆಲ ಸಂಘಟನೆಗಳು ದರ್ಶನ್ ವಿರುದ್ಧ ದೂರು ನೀಡಿದ್ದವು, ಅದೇ ಸಮಯದಲ್ಲಿ ಗೌಡ್ತಿಯರ ಸೇನೆ ಸಂಘಟನೆಯ ಸದಸ್ಯರು ದರ್ಶನ್, ‘ಇಂದು ಇವಳಿರ್ತಾಳೆ, ನಾಳೆ ಅವಳಿರ್ತಾಳೆ’, ‘ಅವಳ ಅಜ್ಜೀನಾ..’ ಪದಗಳನ್ನು ಮಹಿಳೆಯರ ಬಗ್ಗೆ ಬಳಸಿರುವುದನ್ನು ವಿರೋಧಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಮಹಿಳಾ ಆಯೋಗವು ಎರಡು ದಿನಗಳ ಹಿಂದಷ್ಟೆ ದರ್ಶನ್ ಅವರಿಗೆ ನೊಟೀಸ್ ಜಾರಿ ಮಾಡಿದೆ. ದರ್ಶನ್ಗೆ ನೊಟೀಸ್ ನೀಡಿರುವ ಬಗ್ಗೆ ಮಾತನಾಡಿರುವ ರಾಜ್ಯ ಮಹಿಳಾ ಆಯೋಗದ ನೂತನ ಅಧ್ಯಕ್ಷೆ, ನಾಗಲಕ್ಷ್ಮಿ, ‘ದರ್ಶನ್ ಅವರ ವಿರದ್ಧ ದೂರು ಸ್ವೀಕರಿಸಿ ಎರಡು ದಿನದ ಹಿಂದೆಯಷ್ಟೆ ಮನೆಗೆ ನೋಟೀಸ್ ಕಳಿಸಲಾಗಿತ್ತು. ಅಲ್ಲಿ ಯಾರೂ ನೊಟೀಸ್ ಸ್ವೀಕರಿಸಲಿಲ್ಲ, ಬಳಿಕ ಅವರ ಪಿಎ ನೊಟೀಸ್ ಸ್ವೀಕರಿಸಿದ್ದಾರೆ. ನೊಟೀಸ್ಗೆ ಉತ್ತರಿಸಲು ಏಳು ದಿನಗಳ ಕಾಲಾವಕಾಶ ಇರುತ್ತದೆ. ಎರಡು ದಿನಗಳು ಮುಗಿದಿದ್ದು ಇನ್ನೂ ಐದು ದಿನಗಳ ಕಾಲಾವಕಾಶ ಇದೆ’ ಎಂದಿದ್ದಾರೆ.
ಇದನ್ನೂ ಓದಿ:ದರ್ಶನ್ ವಿರುದ್ಧ ಮತ್ತೊಂದು ದೂರು, ಮಾರ್ಚ್ 1ಕ್ಕೆ ವಿಚಾರಣೆ
‘ನೊಟೀಸ್ಗೆ ದರ್ಶನ್ ಅವರು ಏನು ಉತ್ತರ ನೀಡುತ್ತಾರೆ ಎಂಬುದನ್ನು ಗಮನಿಸಿ, ಆ ಬಳಿಕ ಅವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಸಾಧ್ಯವಾದರೆ ಕ್ರಮ ಜರುಗಿಸಲಾಗುತ್ತದೆ. ಒಂದೊಮ್ಮೆ ಅವರು ತಪ್ಪು ಮಾಡಿದ್ದೇ ಆಗಿದ್ದಲ್ಲಿ, ಅವರು ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಾನು ಸಹ ನಿನ್ನೆ (ಫೆಬ್ರವರಿ 29)ಯಷ್ಟೆ ಅಧಿಕಾರವಹಿಸಿಕೊಂಡಿದ್ದೇನೆ. ಈ ಪ್ರಕರಣದ ಬಗ್ಗೆ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಿದ್ದೇವೆ’ ಎಂದಿದ್ದಾರೆ.
‘ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳೆಯರ ಬಗ್ಗೆ ಕೀಳು ಪದಗಳನ್ನು ದರ್ಶನ್ ಬಳಸಿದ್ದಾರೆಂದು ಗೌಡ್ತಿ ಸೇನೆ ಸದಸ್ಯರು ದೂರು ದಾಖಲಿಸಿದ್ದಾರೆ. ಇದೇ ವಿಷಯವಾಗಿ ದರ್ಶನ್ರಿಂದ ಸ್ಪಷ್ಟನೆ ಕೇಳಲಾಗಿದೆ’ ಎಂದಿರುವ ನಾಗಲಕ್ಷ್ಮಿ, ‘ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು ಸೂಕ್ತವಲ್ಲ. ಮಹಿಳೆಯರಿಗೆ ಆತ್ಮಗೌರವವಿದೆ, ಅವರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ತಮ್ಮ ಮೇಲಾಗುತ್ತಿರುವ ವಿರುದ್ಧ ದೌರ್ಜನ್ಯದ ವಿರುದ್ಧ ಹೋರಾಡಬೇಕು’ ಎಂದಿದ್ದಾರೆ.
ದರ್ಶನ್ ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಕೆಲ ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ದರ್ಶನ್, ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಅವನಜ್ಜೀನಾ ಬಡಿಯಾ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನಗೇನಿದ್ದರು ನನ್ನ ‘ಸೆಲೆಬ್ರಿಟಿಗಳು’ (ಅಭಿಮಾನಿ) ಹಾಗೂ ನನ್ನ ಕೆಲಸ ಅಷ್ಟೆ ಮುಖ್ಯ’ ಎಂದಿದ್ದರು. ದರ್ಶನ್ ಅವರು ಈ ಮಾತನ್ನು ತಮ್ಮ ಪತ್ನಿ ಹಾಗೂ ಆಪ್ತೆ ಪವಿತ್ರಾ ಬಗ್ಗೆ ಹೇಳಿದ್ದಾರೆ ಎನ್ನಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ