
ಬಾಲಿವುಡ್ನಲ್ಲಿ (Bollywood) ಬಲು ಜೋರಾಗಿ ನಡೆದಿದ್ದ ನೆಪೊಟಿಸಮ್ ಚರ್ಚೆ ಆಗೊಮ್ಮೆ-ಈಗೊಮ್ಮೆ ಕನ್ನಡ ಚಿತ್ರರಂಗದಲ್ಲೂ ಕೇಳಿ ಬರುತ್ತದೆ. ಇದೀಗ ಸುದೀಪ್ ಅವರು ತಮ್ಮ ಅಕ್ಕನ ಮಗ ಸಂಚಿತ್ ಸಂಜಯ್ ಅವರನ್ನು ‘ಮ್ಯಾಂಗೊ ಪಚ್ಚ’ ಮೂಲಕ ಚಿತ್ರರಂಗಕ್ಕೆ ಲಾಂಚ್ ಮಾಡಿದ್ದು, ಸಿನಿಮಾಕ್ಕಾಗಿ ಸಖತ್ ಪ್ರಚಾರವನ್ನೂ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಬಗ್ಗೆ ಕರೆದಿದ್ದು ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗೆ ನೆಪೊಟಿಸಮ್ ಪ್ರಶ್ನೆ ಎದುರಾಯ್ತು.
ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್, ‘ದೊಡ್ಮನೆಯರನ್ನು ಏಕೆ ಪ್ರಶ್ನೆ ಕೇಳಲ್ಲ, ಶಿವಣ್ಣ ಅವರನ್ನು ಏಕೆ ಕೇಳಲ್ಲ’ ಎಂದಿದ್ದರು. ಆದರೆ ಅವರ ಉದ್ದೇಶ ಇದ್ದಿದ್ದು, ದೊಡ್ಮನೆಯವರು ತಮ್ಮ ಕಲೆಯಿಂದ ಮೇಲೆ ಬಂದು ಹೆಸರು ಗಳಿಸಿದವರು ಎಂಬುದಾಗಿತ್ತು. ಆದರೆ ಅವರ ಮಾತನ್ನು ಬೇರೆ ರೀತಿಯಾಗಿ ಅರ್ಥ ಮಾಡಿಕೊಂಡು, ಸುದೀಪ್ ಅವರನ್ನು ಟೀಕೆ ಸಹ ಮಾಡಲಾಗಿತ್ತು. ಇದೀಗ ಮತ್ತೊಂದು ಸಂದರ್ಶನದಲ್ಲಿ ಈ ಬಗ್ಗೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಬಿಗ್ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್, ‘ಆ ಮನೆ, ಈ ಮನೆ ಅಂಥ ಅಲ್ಲ, ಅವರು (ದೊಡ್ಮನೆಯವರು) ನಮಗೆ ಬಹಳ ಬೇಕಾದವರು, ನಾನು ಬಹಳ ಪ್ರೀತಿಯಿಂದ ಅವರನ್ನು ಶಿವಣ್ಣ ಎಂದು ಕರೆಯುತ್ತೇನೆ. ಶಿವಣ್ಣ ಅವರನ್ನು ನೆಪೊಟಿಸನ್ ಎಂದು ಹೇಳ್ತೀವಾ ಅಥವಾ ಕಲೆ ಎಂದು ಹೇಳ್ತೀವಾ? ಅಪ್ಪು ಸಾಧಿಸಿದ್ದು ಕಲೆಯಿಂದಲೇ ಅಲ್ಲವೇ?’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:‘ಮ್ಯಾಂಗೊ ಪಚ್ಚ’ ಕಟೌಟ್ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?
‘ಶಿವಣ್ಣ ಮತ್ತು ಅಪ್ಪು ನಾಡಿನ ಅತ್ಯುತ್ತಮ ಪ್ರತಿಭೆಗಳು. ಎಷ್ಟೋ ಜನ ಅವರನ್ನು ನೋಡಿ ಸ್ಪೂರ್ತಿ ಪಡೆದಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಜನ ಸುಮ್ಮ-ಸುಮ್ಮನೆ ಅಭಿಮಾನಿಗಳಾಗಿಬಿಡ್ತಾರಾ? ನೆಪೊಟಿಸಮ್ ಮಾತ್ರವೇ ಆಗಿದ್ದಲ್ಲಿ, ಎಲ್ಲ ಸ್ಟಾರ್ ನಟರ ಮಕ್ಕಳು ಸ್ಟಾರ್ಗಳಾಗಿಬಿಡಬೇಕಿತ್ತು ಅಲ್ಲವೆ? ರಾಜ್ಕುಮಾರ್ ಅವರ ಕಾಲದಿಂದಲೂ ನಮ್ಮ ಕರ್ನಾಟಕದ ಜನ ನೋಡುವುದು ಕಲೆಯನ್ನು ಮಾತ್ರ. ನಿಮ್ಮಲ್ಲಿ ಕಲೆ ಇದ್ದರೆ ನೀವು ಬೆಳೆಯುವುದು ಗ್ಯಾರೆಂಟಿ, ಯಾವ ಕುಟುಂಬದವರು ಎಂದೆಲ್ಲ ನೋಡುವುದಿಲ್ಲ’ ಎಂದು ಸುದೀಪ್ ವಿವರಿಸಿ ಹೇಳಿದ್ದಾರೆ.
ನೆಪೊಟೀಸಮ್ ಅಲ್ಲ ಪ್ರತಿಭೆ ಮುಖ್ಯ ಎಂದು ಹೇಳಲು ಶಿವಣ್ಣ ಮತ್ತು ಅಪ್ಪು ಅವರಿಗಿಂತಲೂ ಹೆಚ್ಚು ಸೂಕ್ತವಾದ ವ್ಯಕ್ತಿಗಳು ಯಾರೂ ಇಲ್ಲ. ಆ ಇಬ್ಬರೂ ಸಹ ಕಲೆಯಿಂದಾಗಿ ಇಷ್ಟು ಎತ್ತರಕ್ಕೆ ಬಂದು ನಿಂತಿದ್ದಾರೆಯೇ ಹೊರತು ನೆಪೊಟಿಸಮ್ ಇಂದ ಅಲ್ಲ’ ಎಂದು ಸುದೀಪ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ