ಇತ್ತೀಚೆಗೆ ಪೆನ್ಡ್ರೈವ್ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆ ಕಾರಣ ಆಗಿದ್ದು ಪ್ರಜ್ವಲ್ ರೇವಣ್ಣ. ಮಾಜಿ ಸಂಸದನ ಖಾಸಗಿ ವಿಡಿಯೋಗಳನ್ನು ಪೆನ್ಡ್ರೈವ್ನಲ್ಲಿ ಹಾಕಿ ವೈರಲ್ ಮಾಡಲಾಗಿತ್ತು. ಈ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಪ್ರಜ್ವಲ್ ಸದ್ಯ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಈ ಮಧ್ಯೆ ಪೆನ್ಡ್ರೈವ್ ಶೀರ್ಷಿಕೆ ಅಡಿಯಲ್ಲಿ ಸಿನಿಮಾ ಒಂದು ಬರುತ್ತಿದೆ. ಆದರೆ, ಈ ಚಿತ್ರಕ್ಕೂ ಅವರ ಕಥೆಗೂ ಯಾವುದೇ ಲಿಂಕ್ ಇಲ್ಲ ಎಂಬುದು ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತು. ಜುಲೈ 4ರಂದು ಈ ಚಿತ್ರದ ಶೀರ್ಷಿಕೆ ಅನಾವರಣ ಆಗಲಿದೆ.
‘ಪೆನ್ಡ್ರೈವ್’ ಚಿತ್ರವನ್ನು ಲಯನ್ ಆರ್. ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ರಾಧಿಕಾ, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಭಾಗ್ಯ, ಗೀತಪ್ರಿಯಾ, ಗೀತಾ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಜುಲೈ 4ರ ಬೆಳಿಗ್ಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಆಗಲಿದೆ. ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಈ ಚಿತ್ರದ ಟೈಟಲ್ನ ಅನಾವರಣ ಮಾಡಲಿದ್ದಾರೆ. ತನಿಷಾ ಕುಪ್ಪಂಡ ಅವರು ‘ಬಿಗ್ ಬಾಸ್’ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದರು. ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಈ ಕಾರಣದಿಂದಲೇ ಅವರಿಗೆ ಈ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಸಿಕ್ಕಿದೆ.
ಇದನ್ನೂ ಓದಿ: ಕಿರಣ್ ರಾಜ್ ಸಿನಿಮಾದಲ್ಲಿ ತನಿಷಾ ಕುಪ್ಪಂಡ ರಗಡ್ ಪೋಲೀಸ್ ಅವತಾರ
ಹಾಗಾದರೆ ಈ ಸಿನಿಮಾದ ಕಥೆ ಏನು? ಈ ಬಗ್ಗೆ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡಿದ್ದಾರೆ. ‘ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಮಾಡಬೇಕು ಎನ್ನುವ ಆಲೋಚನೆ ಮೊದಲೇ ಇತ್ತು. ಆದರೆ, ಟೈಟಲ್ ರಿಜಿಸ್ಟರ್ ಮಾಡಿರಲಿಲ್ಲ. ಈಗ ಪೆನ್ಡ್ರೈವ್ ವಿಚಾರ ಚರ್ಚೆಯಲ್ಲಿರುವುದರಿಂದ ಸ್ವಲ್ಪ ಬೇಗ ಸಿನಿಮಾ ಮಾಡಬೇಕು ಎನಿಸಿತು ಅಷ್ಟೇ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:01 am, Wed, 3 July 24