‘ಮಿಸ್ಟರ್ ಜಾಕ್’: ‘ಆರಂಭ ವಸಂತ’ ಹಾಡಿನಲ್ಲಿ ಗಮನ ಸೆಳೆದ ತಪಸ್ವಿನಿ-ಗುರು ನಂದನ್ ಕೆಮಿಸ್ಟ್ರಿ
‘ಪ್ರೇಮದ ಊರಲಿ’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ತಪಸ್ವಿನಿ ಪೂಣಚ್ಚ ಹಾಗೂ ಗುರು ನಂದನ್ ನಟನೆಯ ‘ಮಿಸ್ಟರ್ ಜ್ಯಾಕ್’ ಸಿನಿಮಾ ಡಿಸೆಂಬರ್ 4ರಂದು ತೆರೆಗೆ ಬರಲಿದೆ. ಈ ಚಿತ್ರದ ಆರಂಭ ವಸಂತ ಹಾಡು ಬಿಡುಗಡೆಯಾಗಿದ್ದು, ಚಿಕ್ಕಮಗಳೂರಿನ ಸುಂದರ ವಾತಾವರಣದಲ್ಲಿ ಶೂಟ್ ಮಾಡಲಾಗಿರುವ ಈ ಮೆಲೋಡಿ ಸಾಂಗ್ ಪ್ರೇಕ್ಷಕರ ಮನ ಸೆಳೆದಿದೆ.

ಮುಖ್ಯಾಂಶಗಳು
- ಡಿಸೆಂಬರ್ 4ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ ‘ಮಿಸ್ಟರ್ ಜ್ಯಾಕ್’ ಸಿನಿಮಾ
- ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಸೆರೆಹಿಡಿಯಲಾದ ‘ಆರಂಭ ವಸಂತ’ ಹಾಡು
- ರುಕ್ಮಿಣಿ ವಸಂತ್ ಜೊತೆಗಿನ ನಂಟು ಸ್ಪಷ್ಟಪಡಿಸಿದ ಗೀತಸಾಹಿತಿ ಪ್ರಮೋದ್ ಮರವಂತೆ
‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ರಮಿಕಾ ಶಿವು, ತಪಸ್ವಿನಿ ಪೂಣಚ್ಚ, ಶ್ರೀರಾಮ್ ಹಾಗೂ ರಂಗಾಯಣ ರಘು ನಟಿಸಿದ್ದಾರೆ. ಈ ಸಿನಿಮಾದ ಹವಾ ಜೋರಿರುವಾಗಲೇ ತಪಸ್ವಿನಿ ಪೂಣಚ್ಚ ಅವರ ಹೊಸ ಚಿತ್ರ ರಿಲೀಸ್ಗೆ ರೆಡಿ ಆಗಿದೆ. ತಪಸ್ವಿನಿ ಹಾಗೂ ‘ಫಸ್ಟ್ ರ್ಯಾಂಕ್’ ರಾಜು ಖ್ಯಾತಿಯ ಗುರು ನಂದನ್ ಅಭಿನಯದ ‘ಮಿಸ್ಟರ್ ಜ್ಯಾಕ್’ ಡಿಸೆಂಬರ್ 4ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ‘ಆರಂಭ ವಸಂತ ಆರಂಭ’ ಹಾಡು ಬಿಡುಗಡೆಯಾಗಿ ಗಮನ ಸೆಳೆದಿದೆ.
‘ಆರಂಭ ವಸಂತ ಆರಂಭ’ ಹಾಡಿಗೆ ಖ್ಯಾತ ಗೀತಸಾಹಿಸಿ ಪ್ರಮೋದ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡು ತುಂಬಾನೇ ಮೆಲೋಡಿಯಾಗಿದೆ. ಈ ಹಾಡಿನ ಬಗ್ಗೆ ಮಾತನಾಡಿದ ಪ್ರಮೋದ್, ‘ಇತ್ತೀಚೆಗೆ ವಸಂತಾ ಪದ ಸಾಕಷ್ಟು ಟ್ರೆಂಡ್ನಲ್ಲಿದೆ. ಪ್ರೇಮದ ಊರಲಿ ಸಿನಿಮಾದಲ್ಲಿ ವಸಂತಾ ಪಾತ್ರ ಗಮನ ಸೆಳೆದಿದೆ. ಅದೇ ರೀತಿ ರುಕ್ಮಿಣಿ ವಸಂತ್ ಹೆಸರು ಕೂಡ ಚರ್ಚೆಯಲ್ಲಿದೆ. ಈ ಹಾಡಿನ ಸಾಲು ಕೂಡ ವಸಂತ ಆರಂಭ ವಸಂತ ಆರಂಭ ಎಂದಿದೆ. ಅದು ಕೇವಲ ಕಾಕತಾಳೀಯ’ ಎಂದರು. ಈ ಹಾಡಿಗೂ ರುಕ್ಮಿಣಿ ವಸಂತ್ಗೂ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿದರು.
‘ಆರಂಭ ವಸಂತ’ ಹಾಡನ್ನು ಮೊದಲು ಕಾಶ್ಮೀರದಲ್ಲಿ ಶೂಟ್ ಮಾಡುವ ಪ್ಲ್ಯಾನ್ ತಂಡದವರಿಗೆ ಇತ್ತು. ಆದರೆ, ನಂತರ ಈ ಪ್ಲ್ಯಾನ್ ಬದಲಾಯಿಸಲಾಯಿತು. ಗುರು ನಂದನ್ ಅವರ ಹುಟ್ಟೂರು ಚಿಕ್ಕಮಗಳೂರು. ಅಲ್ಲಿನ ವಾತಾವರಣ ಈ ಸಾಂಗ್ಗೆ ಪರ್ಫೆಕ್ಟ್ ಆಗಲಿದೆ ಎಂದು ಗುರು ನಂದನ್ ಅವರಿಗೆ ಅನಿಸಿತು. ನಿರ್ದೇಶಕರಿಗೆ ಈ ಬಗ್ಗೆ ತಿಳಿಸಿದಾಗ ಅವರು ಒಪ್ಪಿಕೊಂಡರು. ಕೊನೆಗೆ ಈ ಹಾಡಿನ ಶೂಟ್ ಚಿಕ್ಕಮಗಳೂರಿನಲ್ಲಿ ನಡೆದಿದೆ. ಜಸ್ಕರಣ್ ಸಿಂಗ್ ಅವರ ಕಂಠದಲ್ಲಿ ಈ ಸಾಂಗ್ ಹಾಡಿದ್ದಾರೆ. ಅವರು ಹಾಡಿನ ಮೆರುಗು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ ರಿಲೀಸ್ ಆಗಿ ತಿಂಗಳು; ಮಾಡಿದ ಕಲೆಕ್ಷನ್ ಎಷ್ಟು?
ಈ ಹಾಡಿಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಇದೆ. ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಸುಮಂತ್ ಗೌಡ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಿವ ಸೇನಾ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಗುರು ನಂದನ್, ತಪಸ್ವಿನಿ ಪೂಣಚ್ಚ, ಗೋಪಾಲ್ ದೇಶ್ಪಾಂಡೆ, ಮಿತ್ರಾ, ಅರವಿಂದ್ ರಾವ್, ‘ಮಜಾಭಾರತ್’ ಖ್ಯಾತಿಯ ಸುಷ್ಮಿತಾ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಆರಂಭಿಸಿದ್ದು, ಶೀಘ್ರವೇ ಟೀಸರ್ ಹಾಗೂಟ ಟ್ರೇಲರ್ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:07 am, Tue, 27 October 26




