
ರಿಷಬ್ ಶೆಟ್ಟಿ (Rishab Shetty) ನಟಿಸಿ, ಹೊಂಬಾಳೆ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶದಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಕನ್ನಡ ಮಾತ್ರವೇ ಅಲ್ಲದೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿಯೂ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಗೆ ಬಂದಿದೆ. ಸಿನಿಮಾ ಬಿಡುಗಡೆಗೆ ಮುಂಚೆ ಪ್ರಚಾರದ ಸಮಯದಲ್ಲಿ ತೆಲುಗು ಜನ ಕೆಲವರು ಭಾಷಾ ಕಾರಣ ಇರಿಸಿಕೊಂಡು ವಿನಾಕಾರಣ ವಿವಾದ ಹುಟ್ಟುಹಾಕುವ ಯತ್ನ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ತೆಲುಗು ಪ್ರೇಕ್ಷಕರು, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ: ಚಾಪ್ಟರ್ 1’ಗೆ ಭರ್ಜರಿ ಪ್ರೀತಿ ನೀಡುತ್ತಿದ್ದಾರೆ.
2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಕರ್ನಾಟಕದ ಬಳಿಕ ದೊಡ್ಡ ಹಿಟ್ ಆಗಿದ್ದು ಆಂಧ್ರ ಮತ್ತು ತೆಲಂಗಾಣಗಳಲ್ಲಿಯೇ ಅದಾದ ಬಳಿಕ ಉತ್ತರ ಭಾರತದ ಪ್ರದೇಶಗಳಲ್ಲಿ ಸಾಕಷ್ಟು ಹಣ ಗಳಿಸಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ಗೂ ಸಹ ತೆಲುಗು ಜನರು ಮೊದಲಿನ ಸಿನಿಮಾಕ್ಕೆ ನೀಡಿದ ಪ್ರೀತಿಯನ್ನೇ ಮತ್ತೆ ನೀಡುತ್ತಿದ್ದಾರೆ. ಸಿನಿಮಾ ಟಿಕೆಟ್ ದರಗಳು ಹೆಚ್ಚಿದ್ದರೂ ಸಹ ಮುಗಿಬಿದ್ದು ಸಿನಿಮಾ ನೋಡಿ ಆನಂದಿಸುತ್ತಿದ್ದಾರೆ, ರಿಷಬ್ ಶೆಟ್ಟಿ ಮತ್ತು ತಂಡದ ಶ್ರಮವನ್ನು ಕೊಂಡಾಡುತ್ತಿದ್ದಾರೆ.
ತೆಲುಗು ರಾಜ್ಯಗಳಲ್ಲಿ ಅದರಲ್ಲಿಯೂ ಹೈದರಾಬಾದ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ದೊರಕಿವೆ. ಸಿನಿಮಾ ಬಿಡುಗಡೆ ಆಗಿ ಎರಡನೇ ದಿನವೂ ಸಹ ಬಹುತೇಕ ಶೋಗಳು ಮುಂಗಡವಾಗಿ ಬುಕ್ ಆಗುತ್ತಿವೆ. ಮಾತ್ರವಲ್ಲದೆ ಶನಿವಾರ, ಭಾನುವಾರದ ಶೋಗಳು ಸಹ ಕೆಲವು ಈಗಾಗಲೇ ಪ್ರೀ ಬುಕ್ ಆಗಿವೆ. ಸಿನಿಮಾ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತೆಲುಗಿನ ಕೆಲವು ಜನಪ್ರಿಯ ಯೂಟ್ಯೂಬ್ ವಿಮರ್ಶಕರು ಸಹ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ನೋಡಿ ಯಶ್, ರಾಧಿಕಾ ಹೇಳಿದ್ದು ಹೀಗೆ
ತೆಲುಗು ರಾಜ್ಯಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡವು ಸರ್ಕಾರಗಳಿಂದ ಅನುಮತಿ ಪಡೆದು ಟಿಕೆಟ್ ದರ ಏರಿಸಿಕೊಂಡಿದೆ. ಹೀಗಾಗಿ ಹೈದರಾಬಾದ್ನ ಹಲವಾರು ಚಿತ್ರಮಂದಿರಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟಿಕೆಟ್ ದರ 390 ಹಾಗೂ 290 ರೂಪಾಯಿಗಳಿವೆ. ಯಾವುದೋ ಕೇಲವೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರವೇ ಟಿಕೆಟ್ ದರ 175-150 ಹಾಗೂ 100 ರೂಪಾಯಿಗಳಿವೆ. ಹಾಗಿದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.
ಇನ್ನು ಚೆನ್ನೈನಲ್ಲಿಯೂ ಸಹ ತಮಿಳು ಆವೃತ್ತಿಯನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಬುಕ್ ಮೈ ಶೋ ಮಾಹಿತಿಯಂತೆ ಚೆನ್ನೈನಲ್ಲಿ ಎರಡನೇ ದಿನವೂ ಸಹ ಹಲವು ಶೋಗಳು ಮುಂಗಡವಾಗಿ ಬುಕ್ ಆಗಿವೆ. ಆದರೆ ಮುಂಗಡ ಬುಕಿಂಗ್ನಲ್ಲಿ ಬೆಂಗಳೂರು ಬಿಟ್ಟರೆ ಹೈದರಾಬಾದ್ ಮುಂದಿದೆ. ಇನ್ನು ಕೊಚ್ಚಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ, ಹೈದರಾಬಾದ್, ಚೆನ್ನೈಗೆ ಹೋಲಿಸಿದರೆ ಕಡಿಮೆ ಶೋಗಳು ದೊರಕಿವೆ, ಅಲ್ಲಿ ಚಿತ್ರಮಂದಿರಗಳ ಸಂಖ್ಯೆಯೂ ಕಡಿಮೆ ಇದೆ. ಆದರೆ ಅಲ್ಲಿಯೂ ಸಹ ಜನ ಮುಂಗಡವಾಗಿ ಬುಕ್ ಮಾಡಿಕೊಂಡು ಸಿನಿಮಾ ವೀಕ್ಷಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ