
ಟೈಟಲ್ ಕಾರಣದಿಂದ ಸುದ್ದಿಯಾದ ‘ತಿಕ್ಲು ರಾಮ’ (Thiklu Rama) ಸಿನಿಮಾದಲ್ಲಿ ಪರಿಸರಕ್ಕೆ ಸಂಬಂಧಿಸಿದ ಕಥೆ ಇರಲಿದೆ. ಇದು ಹೃದಯಸ್ಪರ್ಶಿ ಕಥೆ ಎಂದು ಚಿತ್ರತಂಡ ಹೇಳಿದೆ. ಇದು ಡಾ. ನಟರಾಜ ಅವರು ಬರೆದ ‘ತಿಕ್ಲು ರಾಮ’ ಕಾದಂಬರಿ ಆಧಾರಿತ ಸಿನಿಮಾ. ಈಗಾಗಲೇ ಈ ಸಿನಿಮಾಗೆ ಶೇಕಡ 40 ಭಾಗ ಶೂಟಿಂಗ್ ಮುಗಿದಿದೆ. ಈಗ ಕಾದಂಬರಿಯನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ‘ತಿಕ್ಲು ರಾಮ’ ಕಾದಂಬರಿ (Kannada Novel) ಬಿಡುಗಡೆ ಸಮಾರಂಭ ನಡೆಯಿತು. ಈ ವೇಳೆ ಚಿತ್ರತಂಡದವರು ಹಾಜರಿದ್ದರು.
ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ಕಾದಂಬರಿ ಬಿಡುಗಡೆ ಸಮಾರಂಭ ಮಾಡಲಾಯಿತು. ಹಿರಿಯ ಗೀತಸಾಹಿತಿ ಡಾ. ದೊಡ್ಡರಂಗೇಗೌಡ, ನಟ-ನಿರ್ದೇಶಕ ಕೆ. ಸುಚೇಂದ್ರ ಪ್ರಸಾದ್, ಸಾಹಿತಿ ಮತ್ತು ನಿರ್ದೇಶಕ ಬಿ. ಶಿವಾನಂದ, ಡಾ. ಭರತ್ ಮುಂತಾದವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ‘ತಿಕ್ಲು ರಾಮ’ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.
ಈ ಸಿನಿಮಾಗೆ ಮಂಜು ಕವಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಡಾ. ರಾಜವೀರ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಕರಿಷ್ಮ-ಶ್ರ್ಯಾವ್ಯ ಕಂಬೈನ್ಸ್ ಬ್ಯಾನರ್ ಮೂಲಕ ಶ್ರುತಿ ಜಿ.ಬಿ. ಮತ್ತು ಕೋಮಲ ನಟರಾಜು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುಚೇಂದ್ರ ಪಸ್ರಾದ್, ಜಹಾಂಗೀರ್, ಚೈತ್ರಾ ರಾಮ್, ಗಿರೀಶ್, ವಿನೋದ್ ಪವಿತ್ರಾ, ನಿಖಿತಾ ಸ್ವಾಮಿ, ಶ್ರಾವ್ಯ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
‘ತಿಕ್ಲು ರಾಮ’ ಕಾದಂಬರಿ ಬಿಡುಗಡೆ ವೇಳೆ ನಿರ್ದೇಶಕ ಮಂಜು ಕವಿ ಮಾತನಾಡಿದರು. ‘ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು. ಓದುವುದರಿಂದ ಖಂಡಿತ ಒಂದಷ್ಟು ಜನರು ಬದಲಾವಣೆ ಆಗ್ತಾರೆ. ಪರಿಸರದ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು? ಪ್ರಕೃತಿ ನಮಗೆ ಏನೆಲ್ಲ ಕೊಟ್ಟಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ವರ್ಣನೆ ಮಾಡಲಾಗಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ತಿಕ್ಲು ರಾಮ’ ಸಿನಿಮಾದ ಶೀರ್ಷಿಕೆ ವಿವಾದ: ದೂರು ದಾಖಲಾದ ಬಳಿಕ ಟೈಟಲ್ ಬದಲಾವಣೆ?
ಸುಚೇಂದ್ರ ಪ್ರಸಾದ್ ಅವರು ಈ ಸಿನಿಮಾದಲ್ಲಿ ಶಾಸಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ‘ಪುಸ್ತಕದಲ್ಲಿ ಗ್ರಾಮೀಣ ಸೊಗಡು ಇದೆ. ಓದುಗರಲ್ಲಿ ಪರಿಸರ ಕಾಳಜಿ ಬಗ್ಗೆ ಆಸಕ್ತಿ ತರಿಸುವಂತಿದೆ. ಇಂತಹ ಕೃತಿಗಳು ನಿರಂತವಾಗಿ ಹೊರಬರಲಿ’ ಎಂದು ಅವರು ಹೇಳಿದರು. ‘ತಿಕ್ಲು ರಾಮ ಕಾದಂಬರಿ ಚೆನ್ನಾಗಿದೆ. ಸಿನಿಮಾ ನೋಡಲು ಕಾತುರನಾಗಿದ್ದೇನೆ’ ಎಂದು ಡಾ. ದೊಡ್ಡರಂಗೇಗೌಡ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.