‘ನಿಮ್ಮ ಬುದ್ಧಿ ಉಪಯೋಗಿಸಿ ಸಿನಿಮಾ ನೋಡಿ’; ‘ಟಾಕ್ಸಿಕ್’ ನೆಗೆಟಿವ್ ವಿಮರ್ಶೆಗೆ ಯಶ್ ಸಹನಟ ಖಡಕ್ ಉತ್ತರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗೆ ವ್ಯಕ್ತವಾಗುತ್ತಿರುವ ನೆಗೆಟಿವ್ ರಿವ್ಯೂಸ್ ವಿರುದ್ಧ ನಟ ಬೆನೆಡಿಕ್ಟ್ ಗ್ಯಾರೆಟ್ ಕಿಡಿಕಾರಿದ್ದಾರೆ. ನೈಜ ಅಥವಾ ಪೇಡ್ ರಿವ್ಯೂಸ್ ನೋಡಿ ಸಿನಿಮಾವನ್ನು ತೀರ್ಮಾನಿಸಬೇಡಿ. ಪ್ರತಿಯೊಬ್ಬರಿಗೂ ಸ್ವಂತ ಬುದ್ಧಿ ಇದೆ, ಅದನ್ನು ಬಳಸಿ ಸಿನಿಮಾ ನೋಡಿ ಎಂದು ಬೆನೆಡಿಕ್ಟ್ ಪ್ರೇಕ್ಷಕರಿಗೆ ಖಡಕ್ ಆಗಿ ಮನವಿ ಮಾಡಿದ್ದಾರೆ.

ನಿಮ್ಮ ಬುದ್ಧಿ ಉಪಯೋಗಿಸಿ ಸಿನಿಮಾ ನೋಡಿ; ಟಾಕ್ಸಿಕ್ ನೆಗೆಟಿವ್ ವಿಮರ್ಶೆಗೆ ಯಶ್ ಸಹನಟ ಖಡಕ್ ಉತ್ತರ
ಟಾಕ್ಸಿಕ್ ಸಿನಿಮಾ

Updated on: Sep 12, 2026 | 3:24 PM

ಮುಖ್ಯಾಂಶಗಳು

  • 'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ ಬೆನೆಡಿಕ್ಟ್ ಖಡಕ್ ಉತ್ತರ
  • ಪೇಡ್ ರಿವ್ಯೂಸ್ ನೋಡಿ ಸಿನಿಮಾ ತೀರ್ಮಾನಿಸಬೇಡಿ ಎಂದ ಹಾಲಿವುಡ್ ನಟ
  • ಯಶ್ ನಟನೆ ಹಾಗೂ ಗೀತು ಮೋಹನ್‌ದಾಸ್ ಸಾಹಸವನ್ನು ಕೊಂಡಾಡಿದ ಬೆನೆಡಿಕ್ಟ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಸಾಗುತ್ತಿದೆ. ಆದರೆ ವಿಮರ್ಶಕರ ನೆಗೆಟಿವ್ ರಿವ್ಯೂಸ್ ಬಗ್ಗೆ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಾಲಿವುಡ್ ನಟ ಬೆನೆಡಿಕ್ಟ್ ಗ್ಯಾರೆಟ್ ಪ್ರತಿಕ್ರಿಯಿಸಿದ್ದಾರೆ. ಜನರ ಅಭಿಪ್ರಾಯಕ್ಕೆ ತಕ್ಕಂತೆ ಸಿನಿಮಾ ಅಳೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಬೆನೆಡಿಕ್ಟ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ‘ಇನ್ನೊಬ್ಬರ (ಅದು ಪೇಡ್ ಇರಲಿ ಅಥವಾ ನೈಜ ಇರಲಿ) ನೆಗೆಟಿವ್ ರಿವ್ಯೂಸ್ ನೋಡಿ ಸಿನಿಮಾವನ್ನು ತೀರ್ಮಾನಿಸುವ ತಪ್ಪನ್ನು ಮಾಡಬೇಡಿ’ ಎಂದು ಅವರು ಬರೆದುಕೊಂಡಿದ್ದಾರೆ. ‘ನಿಮಗೆ ಸ್ವಂತ ಬುದ್ಧಿ ಇದೆ. ಅದನ್ನು ಉಪಯೋಗಿಸಿ ಸಿನಿಮಾ ನೋಡಿ’ ಎಂದು ಅವರು ಪ್ರೇಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.

ಇದೇ ವೇಳೆ ಬೆನೆಡಿಕ್ಟ್ ಅವರು ಚಿತ್ರದ ಬಗ್ಗೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನನಗೂ ಕೂಡ ಆಕ್ಷನ್ ಸಿನಿಮಾಗಳ ಮೇಲೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ ಈ ಸಿನಿಮಾ ತಮ್ಮ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದೆ’ ಎಂದು ಅವರು ತಿಳಿಸಿದ್ದಾರೆ. ‘ಈ ಚಿತ್ರವು ಕೇವಲ ಹಿಂಸೆ ಅಥವಾ ಗ್ಲಾಮರ್‌ಗೆ ಸೀಮಿತವಾಗಿಲ್ಲ. ಇದೊಂದು ವಯಸ್ಕರಿಗಾಗಿ ಮಾಡಿದ ವಿಭಿನ್ನ ಕಥೆ’ ಎಂದು ಅವರು ಬಣ್ಣಿಸಿದ್ದಾರೆ.

ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಪ್ರಯತ್ನವನ್ನು ಬೆನೆಡಿಕ್ಟ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಪ್ರತಿಯೊಬ್ಬರಿಗೂ ಇಷ್ಟವಾಗುವ ರೀತಿಯಲ್ಲಿ ಸಿನಿಮಾ ಮಾಡುವುದು ಸುಲಭವಲ್ಲ. ಆದರೆ ಗೀತು ಅವರು ಸವಾಲಿನ ಹಾದಿಯನ್ನು ಆಯ್ದುಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಯಶ್ ಅವರ ನಟನೆ ನಿಜಕ್ಕೂ ಅದ್ಭುತವಾಗಿದೆ ಎಂದು ಅವರು ಹೊಗಳಿದ್ದಾರೆ. ಈ ಸಿನಿಮಾದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಬೆನೆಡಿಕ್ಟ್ ಹೇಳಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಫಲಿತಾಂಶದ ಬಗ್ಗೆ ಯಶ್ ಮೊದಲ ರಿಯಾಕ್ಷನ್ ಏನು? ಕೊನೆಗೂ ಸಿಕ್ಕಿತು ಉತ್ತರ 

ಪೋರ್ಚುಗೀಸ್ ಆಳ್ವಿಕೆಯ ಗೋವಾದ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಚಿತ್ರದಲ್ಲಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಚಿತ್ರಕಥೆ ಹಾಗೂ ಹಿಂಸೆಯ ದೃಶ್ಯಗಳ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us