ಕನ್ನಡ ಚಿತ್ರರಂಗಕ್ಕೀಗ (Sandalwood) ಸುವರ್ಣ ಕಾಲ. ಹಲವು ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಆದರೂ ಗೆಲುವು ಸಿಗುವುದು ಕೆಲವೇ ಮಂದಿಗೆ ಮಾತ್ರ. ಈ ಹಿಂದಿನ ವಾರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಎದುರಲ್ಲಿ ಹೊಸ ಚಿತ್ರಗಳು ಪೈಪೋಟಿಗೆ ಇಳಿಯುತ್ತಿವೆ. ಈ ಶುಕ್ರವಾರ (ನ.25) ಕೂಡ ಕನ್ನಡದ ಕೆಲವು ಸಿನಿಮಾಗಳು ತೆರೆಕಾಣುತ್ತಿವೆ. ಪರಭಾಷೆಯಲ್ಲೂ ಸ್ಟಾರ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಅಭಿಮಾನಿಗಳು ‘ತ್ರಿಬಲ್ ರೈಡಿಂಗ್’ ನೋಡಲು ಕಾದಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ‘ರೇಮೊ’ (Raymo) ಚಿತ್ರ ಕೂಡ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿದೆ. ಈ ವಾರ ತೆರೆಕಾಣುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ..
‘ತ್ರಿಬಲ್ ರೈಡಿಂಗ್’
ನಟ ಗಣೇಶ್ ಅವರು ಪ್ರತಿ ಸಿನಿಮಾದಲ್ಲೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಪ್ರಯತ್ನಿಸುತ್ತಾರೆ. ಅವರು ಸಿನಿಮಾಗಳಲ್ಲಿ ಏನಾದರೂ ವಿಶೇಷ ಇದ್ದೇ ಇರುತ್ತದೆ ಎಂಬ ಭರವಸೆ ಪ್ರೇಕ್ಷಕರಿಗೆ ಇದೆ. ಅವರು ನಟಿಸಿರುವ ‘ತ್ರಿಬಲ್ ರೈಡಿಂಗ್’ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಅವರಿಗೆ ಮೂವರು ನಾಯಕಿಯರು. ಮೇಘಾ ಶೆಟ್ಟಿ, ರಚನಾ ಇಂದರ್, ಅದಿತಿ ಪ್ರಭುದೇವ ಜೊತೆ ಗಣೇಶ್ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ.
ಇಶಾನ್-ಆಶಿಕಾ ಜೋಡಿಯ ‘ರೇಮೊ’:
ಪವನ್ ಒಡೆಯರ್ ಅವರು ಲವ್ ಸ್ಟೋರಿ ಸಿನಿಮಾಗಳನ್ನು ತೆರೆಗೆ ತರುವಲ್ಲಿ ಸಿದ್ಧಹಸ್ತರು. ಈ ಬಾರಿ ಅವರು ‘ರೇಮೊ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಮತ್ತು ಇಶಾನ್ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ನಲ್ಲಿ ಕಥೆಯ ಎಳೆ ಬಿಟ್ಟುಕೊಡಲಾಗಿದೆ. ಸಿ.ಆರ್. ಮನೋಹರ್ ಅವರು ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
‘ಸದ್ದು ವಿಚಾರಣೆ ನಡೆಯುತ್ತಿದೆ’:
ರಾಕೇಶ್ ಮಯ್ಯ, ಪಾವನಾ ಗೌಡ, ಮಧು ನಂದನ್, ಅಚ್ಯುತ್ ಕುಮಾರ್ ಮುಂತಾದವರು ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ. ಜಾತಿ ಪಿಡುಗಿನಂತಹ ಗಂಭೀರ ವಿಷಯವೂ ಚಿತ್ರದಲ್ಲಿದೆ ಎಂಬದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಈ ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ.
ಫ್ಯಾಂಟಸಿ ಕಥಾಹಂದರದ ‘ಭೇಡಿಯಾ’:
ವರುಣ್ ಧವನ್ ಅವರು ‘ಭೇಡಿಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ವರ್ಷ ಗೆಲುವು ಕಂಡ ಬಾಲಿವುಡ್ ಸಿನಿಮಾಗಳ ಸಂಖ್ಯೆ ಕಡಿಮೆ. ‘ಭೇಡಿಯಾ’ ಸೂಪರ್ ಹಿಟ್ ಆಗಬಹುದು ಎಂಬ ನಿರೀಕ್ಷೆ ಇದೆ. ‘ಸ್ಪೈಡರ್ ಮ್ಯಾನ್’ ರೀತಿಯ ಫ್ಯಾಂಟಸಿ ಕಥೆ ಈ ಚಿತ್ರದಲ್ಲಿ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.