
ಮಾಜಿ ಬಿಗ್ಬಾಸ್ (Bigg Boss) ಸ್ಪರ್ಧಿ, ನಟ ಉಗ್ರಂ ಮಂಜು ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದು ಕೊಂಡಿದೆ. ಉಗ್ರಂ ಮಂಜು ಅವರು ಮದುವೆ ಆಗಿಲ್ಲ ಎಂಬ ಕಾರಣಕ್ಕೆ ಗೆಳೆಯರಿಂದ ತಮಾಷೆಗೆ ಒಳಗಾಗಿದ್ದರು. ಸಂದರ್ಶನಗಳಲ್ಲಿ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಕಾಮನ್ ಆಗಿಬಿಟ್ಟಿತ್ತು. ಇದೀಗ ಉಗ್ರಂ ಮಂಜು ಅವರ ಮದುವೆ ನಿಶ್ಚಯವಾಗಿದೆ. ಅನುರೂಪವಾದ ವಧುವೊಬ್ಬರನ್ನು ಉಗ್ರಂ ಮಂಜು ಹುಡುಕಿಕೊಂಡಿದ್ದಾರೆ. ಈ ಬಗ್ಗೆ ಉಗ್ರಂ ಮಂಜು ಅವರು ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ಉಗ್ರಂ ಮಂಜು ಅವರು ಸಂಧ್ಯಾ ಅವರನ್ನು ವಿವಾಹವಾಗಲಿದ್ದು, ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಆತ್ಮೀಯರು, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ. ಪರಸ್ಪರ ಉಂಗುರ ಬದಲಾಯಿಸಿಕೊಳ್ಳುತ್ತಿರುವ ಚಿತ್ರಗಳನ್ನು ಉಗ್ರಂ ಮಂಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ವೀಕ್ಷಕರಿಗೆ ಮತ್ತೆ ನೆನಪಾದ ಉಗ್ರಂ ಮಂಜು
ಉಗ್ರಂ ಮಂಜು ಅವರು ಸಂಧ್ಯಾ ಎಂಬುವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂಧ್ಯಾ ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್ಪ್ಲ್ಯಾಂಟ್ ಕೋರ್ಡಿನೇಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯವಾಗಿರುವ ಸಂಧ್ಯಾ ಅವರು ತಮ್ಮ ಹಲವಾರು ವಿಡಿಯೋಗಳು ಮತ್ತು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ. ಇದೀಗ ಉಗ್ರಂ ಮಂಜು ಮತ್ತು ಸಂಧ್ಯಾ ಅವರ ನಿಶ್ಚಿತಾರ್ಥ ನೆರವೇರಿದ್ದು ಜನವರಿ ತಿಂಗಳಲ್ಲಿ ವಿವಾಹ ನಡೆಯಲಿದೆ.
ಈ ಹಿಂದೆ ಬಿಗ್ಬಾಸ್ಗೆ ಉಗ್ರಂ ಮಂಜು ಬಂದಿದ್ದಾಗ ಅವರು ಮದುವೆ ಆಗಬೇಕು ಎಂದು ಅವರ ತಂದೆ ಆಸೆ ವ್ಯಕ್ತಪಡಿಸಿದ್ದರು. ಮಂಜು ಕೇಳಿದಾಗ ನಮಗೆ ಮದುವೆ ಮಾಡಿಸಲು ಆಗಿರಲಿಲ್ಲ ಎಂದು ಬೇಸರ ಸಹ ವ್ಯಕ್ತಪಡಿಸಿದ್ದರು. ಆದರೆ ಆ ಬಳಿಕ ಮಂಜು ಸಹ ಪೋಷಕರ ಆಸೆಯಂತೆ ಮದುವೆ ಆಗುವುದಾಗಿ ಹೇಳಿದ್ದರು. ಇದೀಗ ಕೊನೆಗೂ ಮಂಜುಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ನಿಶ್ಚಿತಾರ್ಥ ಮಾಡಿಕೊಂಡಿರುವ ಮಂಜು ಶೀಘ್ರವೇ ಮದುವೆ ಆಗುವುದು ಖಾತ್ರಿ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Sun, 9 November 25