‘ರಾಬರ್ಟ್’ ಟೈಟಲ್ ಹುಟ್ಟಿದ್ದು ಹೇಗೆ? ‘ಕಾಟೇರ’ ಕತೆ ಪ್ರಾರಂಭವಾಗಿದ್ದು ಹೇಗೆ?

|

Updated on: Feb 20, 2024 | 10:10 PM

Umapathy Srinivas: ‘ಕಾಟೇರ’ ಸಿನಿಮಾದ ಕತೆ ಹಾಗೂ ಟೈಟಲ್ ವಿವಾದದ ಬಗ್ಗೆ ದರ್ಶನ್ ಆಡಿರುವ ಮಾತುಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿರುವ ಉಮಾಪತಿ ಶ್ರೀನಿವಾಸ್, ‘ರಾಬರ್ಟ್’ ಟೈಟಲ್ ಹಾಗೂ ‘ಕಾಟೇರ’ ಕತೆ ಹುಟ್ಟಿದ್ದು ಹೇಗೆಂದು ವಿವರಿಸಿದ್ದಾರೆ.

‘ರಾಬರ್ಟ್’ ಟೈಟಲ್ ಹುಟ್ಟಿದ್ದು ಹೇಗೆ? ‘ಕಾಟೇರ’ ಕತೆ ಪ್ರಾರಂಭವಾಗಿದ್ದು ಹೇಗೆ?
Follow us on

ದರ್ಶನ್ ತೂಗುದೀಪ (Darshan Thoogudeepa) ಮತ್ತು ಉಮಾಪತಿ ಶ್ರೀನಿವಾಸ್ ನಡುವೆ ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ. ‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದಾಗಿ ಉಮಾಪತಿ ಶ್ರೀನಿವಾಸ್ ಹೇಳಿದ್ದರು. ಇದಕ್ಕೆ ಠಕ್ಕರ್ ಕೊಟ್ಟಿರುವ ದರ್ಶನ್, ‘ರಾಬರ್ಟ್’ ಕತೆ, ಟೈಟಲ್ ಕೊಟ್ಟಿದ್ದು ತಾವು ಅಲ್ಲದೆ, ‘ಕಾಟೇರ’ ಟೈಟಲ್ ಸಹ ತಾವೇ ಕೊಟ್ಟಿದ್ದು ಎಂದಿದ್ದಾರೆ. ಇದರ ನಡುವೆ ‘ತಗಡು’, ‘ಗುಮ್ಮಿಸ್ಕೋಳ್ತೀಯ’ ಎಂಬ ನಿಂದಕ ಪದಗಳನ್ನು ಸಹ ಉಮಾಪತಿ ಕುರಿತಾಗಿ ಬಳಸಿದ್ದಾರೆ. ದರ್ಶನ್ ಮಾತುಗಳಿಗೆ ಖಡಕ್ ಆಗಿಯೇ ಪ್ರತ್ಯುತ್ತರ ಕೊಟ್ಟಿರುವ ಉಮಾಪತಿ ಶ್ರೀನಿವಾಸ್, ‘ರಾಬರ್ಟ್’ ಟೈಟಲ್ ಹಾಗೂ ‘ಕಾಟೇರ’ ಸಿನಿಮಾದ ಕತೆ ಹುಟ್ಟಿದ ಬಗೆಯನ್ನು ವಿವರಿಸಿದ್ದಾರೆ.

‘ಕಾಟೇರ’ ಸಿನಿಮಾದ ಕತೆಯ ಹೇಗೆ ಹುಟ್ಟಿತು ಎಂಬ ಬಗ್ಗೆ ಮಾತನಾಡಿರುವ ಉಮಾಪತಿ ಶ್ರೀನಿವಾಸ್, ‘ನೇರವಾಗಿ ಹೇಳ್ತೀನಿ, ನಮ್ಮ ನಿರ್ಮಾಣ ಸಂಸ್ಥೆಯ ನೆರವು ಪಡೆದೇ ‘ಕಾಟೇರ’ ಸಿನಿಮಾದ ಕತೆ ಮಾಡಿದ್ದು. 2017ರಲ್ಲಿ ನನ್ನಿಂದ ಹಣಕಾಸು ಸಹಾಯ ತೆಗೆದುಕೊಂಡು ರೆಸಾರ್ಟ್​ಗೆ ಹೋಗಿ ಕತೆ ಮಾಡಿದರು. ಅದು ಜಡೇಶ್​ ಅವರ ಕತೆ, ತರುಣ್ ಸುಧೀರ್ ಅವರ ಕಡೆಯಿಂದ ನನಗೆ ಬಂತು. ನಾನು ಹಣ ಕೊಟ್ಟು ಇವರನ್ನು ಶ್ರವಣ ಬೆಳಗೊಳದ ಬಳಿ ರೆಸಾರ್ಟ್​ಗೆ ಕಳಿಸಿ ಕತೆ ಮಾಡಿಸಿದೆ. ವರಮಹಾಲಕ್ಷ್ಮಿ ಹಬ್ಬದಂದು ಅಡ್ವಾನ್ಸ್ ಹಣ ಕೊಟ್ಟಿದ್ದೆ. ಅಂದು ಹಣ ಕೊಡೋದು ಬೇಡ ಎಂದು ಮನೆಯವರು ಹೇಳಿದರು. ಒಬ್ಬರು ನಿರ್ಮಾಪಕರು ಸಹ ಹೇಳಿದರು. ಆದರೆ ನಾನು ಅದಕ್ಕೆಲ್ಲ ಕೇರ್ ಮಾಡದೆ ಹಣ ಕೊಟ್ಟು ಕತೆ ಮಾಡಿಸಿದೆ. ಆದರೆ ನಮ್ಮ ಹಾಗೂ ದರ್ಶನ್ ನಡುವೆ ಸಂಬಂಧ ಬಿಗಡಾಯಿಸಿದ ಕಾರಣ ಸಿನಿಮಾ ಆಗಲಿಲ್ಲ’ ಎಂದರು ಉಮಾಪತಿ ಶ್ರೀನಿವಾಸ್.

ಇದನ್ನೂ ಓದಿ: ದರ್ಶನ್ ‘ತಗಡು’ ಹೇಳಿಕೆಗೆ ಉಮಾಪತಿ ಶ್ರೀನಿವಾಸ್ ಸೈಲೆಂಟ್ ಟಾಂಗ್

‘ರಾಬರ್ಟ್’ ಟೈಟಲ್ ಬಗ್ಗೆಯೂ ಮಾತನಾಡಿದ ಉಮಾಪತಿ ಶ್ರೀನಿವಾಸ್, ‘ಚೌಕ’ ಸಿನಿಮಾಕ್ಕೆ ನಾನೂ ಸಹ ಸಹಾಯ ಮಾಡಿದ್ದೆ ಹಾಗಾಗಿ ಅದರ ನಿರ್ಮಾಪಕರು ನನಗೆ ಸಿನಿಮಾ ತೋರಿಸಿದರು. ಸಿನಿಮಾ ನೋಡಿ ಅದರಲ್ಲಿ ದರ್ಶನ್​ರ ಪಾತ್ರ ಇಷ್ಟವಾಗಿ ನಾನು ಆ ಹೆಸರು ರಿಜಿಸ್ಟರ್ ಮಾಡಿಸಿದೆ. ಆಗ ದರ್ಶನ್ ಅವರೊಟ್ಟಿಗೆ ಸಿನಿಮಾ ಮಾಡುವ ಮಾತುಕತೆ ಆಗಿತ್ತಷ್ಟೆ ಅಡ್ವಾನ್ಸ್ ಸಹ ಕೊಟ್ಟಿರಲಿಲ್ಲ. ಸಿನಿಮಾ ಮಾತುಕತೆಗೆ ಬಂದಾಗ ‘ರಾಬರ್ಟ್’ ಟೈಟಲ್ ಬೇಡ ಅಂದರು. ಅದು ಒಂದು ವರ್ಗಕ್ಕೆ ಎಂಬಂತಾಗುತ್ತೆ ಎಂಬ ಕಾರಣಕ್ಕೆ ಬೇಡ ಅಂದರು. ಆದರೆ ನಾನು ಇಲ್ಲ ‘ಚೌಕ’ದಲ್ಲಿ ಆ ಹೆಸರಿನ ಪಾತ್ರ ಹಿಟ್ ಆಗಿದೆ. ಅದೇ ಹೆಸರಿಟ್ಟು ಸಿನಿಮಾ ಮಾಡೋಣ ಎಂದು ಒಪ್ಪಿಸಿ ಸಿನಿಮಾ ಮಾಡಿಸಿದೆ’ ಎಂದಿದ್ದಾರೆ.

ಇನ್ನು ‘ಕಾಟೇರ’ ಸಿನಿಮಾದ ಟೈಟಲ್ ವಿಷಯದ ಬಗ್ಗೆಯೂ ಮಾತನಾಡಿದ ಉಮಾಪತಿ ಶ್ರೀನಿವಾಸ್. ‘ರಾಬರ್ಟ್’ ಸಿನಿಮಾ ಶೂಟಿಂಗ್ ಮಾಡುವಾಗ ‘ಕಾಟೇರ’ ಟೈಟಲ್ ರಿಜಿಸ್ಟರ್ ಮಾಡಿಸಲಾಯ್ತು. ಹೆಸರು ಸೂಚಿಸಿದ್ದು ದರ್ಶನ್ ಅವರೇ, ಆಗ ಬೇರೆ ನಿರ್ದೇಶಕರಿದ್ದರು, ಒಂದು ರೆಸಲಿಂಗ್​ಗೆ ಸಂಬಂಧಿಸಿದ ಕತೆ ಇತ್ತು. ಅದಕ್ಕಾಗಿ ಆ ಹೆಸರು ಯೋಜಿಸಿದ್ದೆವು ಆದರೆ ಆ ಸಿನಿಮಾ ಆಗಲಿಲ್ಲ. ಆ ಹೆಸರು ರಿಜಿಸ್ಟರ್ ಆದಾ ತರುಣ್ ಸುಧೀರ್ ಇರಲಿಲ್ಲ ಮಹೇಶ್ ಸಹ ಇರಲಿಲ್ಲ. ಆ ನಂತರ ಬಂದ ಮಹೇಶ್, ನಮ್ಮನ್ನು ಮಿಸ್ ಲೀಡ್ ಮಾಡಿದರು. ‘ಮದಗಜ’ ಟೈಟಲ್ ನನ್ನ ಬಳಿ ಇದೆ, ಯೋಗರಾಜ್ ಭಟ್ ಬ್ಯಾನರ್​ನಲ್ಲಿ ರಿಜಿಸ್ಟರ್ ಮಾಡಿಸಿದ್ದೀನಿ ಎಂದು ಸಿನಿಮಾ ಹೆಸರು ಅನೌನ್ಸ್ ಮಾಡಿದರು. ಆದರೆ ಅದು ರಾಮಮೂರ್ತಿ ಅವರ ಬಳಿ ಇತ್ತು. ಆಗ ದರ್ಶನ್ ಮಧ್ಯ ಬಂದು ನನ್ನ ಬಳಿ ಇದ್ದ ‘ಕಾಟೇರ’ ಸಿನಿಮಾ ಟೈಟಲ್ ಅವರಿಗೆ ಕೊಡಿಸಿ ‘ಮದಗಜ’ ಟೈಟಲ್ ನಮಗೆ ಕೊಡಿಸಿದರು’ ಎಂದರು.

ಇದನ್ನೂ ಓದಿ:ತಾಕತ್ತಿದ್ದರೆ ಮಾಡಿ ತೋರಿಸಲಿ: ದರ್ಶನ್​ಗೆ ಉಮಾಪತಿ ಸವಾಲ್

‘ಕಾಟೇರ’ ಸಿನಿಮಾ ನಾನು ಮಾಡಲಾಗಲಿಲ್ಲ, ಆದರೆ ಅದೇ ಕತೆ, ಅದೇ ಹೆಸರಿನ ಸಿನಿಮಾ ರಾಕ್​ಲೈನ್ ವೆಂಕಟೇಶ್ ಅವರ ಬ್ಯಾನರ್​ನಿಂದ ಸಿನಿಮಾ ಆಗುತ್ತಿದೆ ಎಂದಾಗ ನಿಜಕ್ಕೂ ನನಗೆ ಖುಷಿಯಾಯಿತು. ಸಿನಿಮಾ ಬಿಡುಗಡೆ ಆದ ಬಳಿಕವೂ ಹಲವು ಚಿತ್ರಮಂದಿರದವರು ಹೇಳಿದರು, ಇದು ಸೂಪರ್ ಹಿಟ್ ಅಂತ ಆಗಲೂ ನನಗೆ ಖುಷಿಯಾಯ್ತು, ಅದನ್ನು ಮಾಧ್ಯಮಗಳ ಬಳಿಯೂ ನಾನು ಹಂಚಿಕೊಂಡೆ. ನಾನು ಕತೆ ಮಾಡಿಸಿದ್ದೆ, ಟೈಟಲ್ ಸಹ ನನ್ನ ಬಳಿ ಇತ್ತು, ಚಿತ್ರತಂಡದಿಂದ ಒಂದು ಕೃತಜ್ಞತೆಗೆ ಒಂದು ಧನ್ಯವಾದ ಹೇಳಲಿಲ್ಲ. ಪರವಾಗಿಲ್ಲ ನಾನು ದೂರದಿಂದ ನಿಂತು ಖುಷಿ ಪಡುತ್ತೀನಿ. ಸಿನಿಮಾ ಬಗ್ಗೆ ನಾನು ಎಲ್ಲೂ ನಾಲಗೆ ಹರಿಬಿಟ್ಟಿಲ್ಲ, ಬದಲಿಗೆ ಸಿನಿಮಾ ಬಗ್ಗೆ ಒಳ್ಳೆಯದನ್ನೇ ಹೇಳಿದ್ದೀನಿ’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ