
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ದೊರೆಯಬೇಕು ಎನ್ನುವ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಈ ಬಗ್ಗೆ ಸಾಕಷ್ಟು ಜನರು, ಸೆಲೆಬ್ರಿಟಿಗಳು ಟ್ವೀಟ್ ಮಾಡುವ ಮೂಲಕ ತಮ್ಮ ಹಕ್ಕೊತ್ತಾಯ ಮಾಡಿದ್ದಾರೆ. ಈಗ ಈ ಅಭಿಯಾನದ ಬಗ್ಗೆ ಸ್ವತಃ ಅನಂತ್ ನಾಗ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬರಹಗಾರ ಜೋಗಿ ಹಾಗೂ ಅವರ ತಂಡ ನಡೆಸುತ್ತಿರುವ ಕ್ಲಬ್ ಹೌಸ್ನ ಹಾಲ್ಫ್ ಸರ್ಕಲ್ನಲ್ಲಿ ಮಾತನಾಡಿರುವ ಅನಂತ್ ನಾಗ್, ‘ನನಗೆ ಪ್ರಶಸ್ತಿ ಸಿಕ್ಕರೆ ಖುಷಿ ಆಗುತ್ತದೆ. ಅದು ಒಂದು ದಿನ ಮಾತ್ರ. ನಂತರ ಈ ಪ್ರಶಸ್ತಿ ಶೋಕೇಸ್ ಸೇರುತ್ತದೆ. ಈ ಪ್ರಶಸ್ತಿಗಿಂತ ಜನರ ಪ್ರೀತಿ ದೊಡ್ಡದು. ಇದನ್ನು ನಾನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀನಿ’ ಎಂದಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರೀತಿಯೇ ದೊಡ್ಡದು ಎಂದು ಹೇಳಿದ್ದಾರೆ.
#AnanthnagForPadma ಎಂಬ ಹ್ಯಾಷ್ಟ್ಯಾಗ್ನಡಿ ಟ್ವಿಟ್ಟರ್ನಲ್ಲಿ ಅಭಿಯಾನ ನಡೆಯುತ್ತಿದೆ. ಸ್ಯಾಂಡಲ್ವುಡ್ ನಿರ್ದೇಶಕ, ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪುನೀತ್ ರಾಜ್ಕುಮಾರ್ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
‘ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಅನಂತ್ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬುದು ನಮ್ಮೆಲ್ಲರ ಆಸೆ. ನಾನು ಅವರ ದೊಡ್ಡ ಅಭಿಮಾನಿ. ಸಿನಿಮಾ ರಂಗಕ್ಕೆ ಅನಂತನಾಗ್ ಕೊಡುಗೆ ಅಪಾರ’ ಎಂದಿದ್ದಾರೆ.
1973ರಲ್ಲಿ ತೆರೆಗೆ ಬಂದಿದ್ದ ‘ಸಂಕಲ್ಪ’ ಸಿನಿಮಾ ಮೂಲಕ ಅನಂತ್ ನಾಗ್ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ವೃತ್ತಿ ಜೀವನದಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದು ಅವರ ಹೆಚ್ಚುಗಾರಿಕೆ.ಅದ್ಭುತ ನಟನೆ ಮೂಲಕ ಅನಂತ್ ನಾಗ್ ಎಲ್ಲರ ಗಮನ ಸೆಳೆದಿದ್ದಾರೆ. ಪೋಷಕ ಪಾತ್ರದಲ್ಲಿ ನಟಿಸೋಕೆ ಅವರಿಗೆ ಭಾರೀ ಬೇಡಿಕೆ ಇದೆ.
ಇದನ್ನೂ ಓದಿ: Padma Awards: ಅನಂತ್ ನಾಗ್ಗೆ ಪದ್ಮ ಪ್ರಶಸ್ತಿ ನೀಡಿ; ಸೆಲೆಬ್ರಿಟಿಗಳಿಂದಲೂ ಶುರುವಾಯ್ತು ಟ್ವಿಟ್ಟರ್ ಅಭಿಯಾನ