ಸಾಹುಕಾರ್ ಜಾನಕಿ ನಿಧನ: ನಾಲ್ವರು ಮುಖ್ಯಮಂತ್ರಿಗಳ ಜೊತೆ ನಟಿಸಿದ್ದ ಅಭಿನೇತ್ರಿ

ನಟಿ ಸಾಹುಕಾರ್ ಜಾನಕಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ, ಅವರ ಅಭಿನಯದ ಸಿನಿಮಾಗಳು ಹಾಗೂ ನಾಲ್ವರು ಮುಖ್ಯಮಂತ್ರಿಗಳೊಂದಿಗಿನ ಅಪರೂಪದ ನಂಟು ದಕ್ಷಿಣ ಭಾರತದ ಚಿತ್ರರಂಗದ ಇತಿಹಾಸದಲ್ಲಿ ನೆನಪಾಗಿ ಉಳಿಯಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಸಾಹುಕಾರ್ ಜಾನಕಿ ನಿಧನ: ನಾಲ್ವರು ಮುಖ್ಯಮಂತ್ರಿಗಳ ಜೊತೆ ನಟಿಸಿದ್ದ ಅಭಿನೇತ್ರಿ
Sowcar Janaki

Updated on: Aug 21, 2026 | 8:41 PM

ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ಅಭಿನೇತ್ರಿಯಲ್ಲೊಬ್ಬರಾದ ಸಾಹುಕಾರ್ ಜಾನಕಿ (Sowcar Janaki) ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರ ಅಗಲಿಕೆಯಿಂದ ದಕ್ಷಿಣ ಭಾರತೀಯ ಸಿನಿರಂಗವು ಒಬ್ಬ ಅಪರೂಪದ ಹಿರಿಯ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ಸಾಹುಕಾರ್ ಜಾನಕಿ ಅವರ ಸಿನಿಮಾಗಳನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಜಾನಕಿ ಜೊತೆ ನಟಿಸಿದ್ದ ನಾಲ್ವರು ಕಲಾವಿದರು, ನಂತರ ಮುಖ್ಯಮಂತ್ರಿಗಳಾದರು ಎಂಬುದು ವಿಶೇಷ.

1950ರಲ್ಲಿ ಎಲ್.ವಿ. ಪ್ರಸಾದ್ ನಿರ್ದೇಶನದ, ಎನ್.ಟಿ. ರಾಮರಾವ್ ಅಭಿನಯದ ‘ಸಾಹುಕಾರ್’ ತೆಲುಗು ಚಿತ್ರದ ಮೂಲಕ ಜಾನಕಿ ಅವರು ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾ ಅವರ ವೃತ್ತಿಜೀವನಕ್ಕೆ ಎಷ್ಟು ದೊಡ್ಡ ತಿರುವು ನೀಡಿತೆಂದರೆ, ಅವರ ಹೆಸರಿನ ಮುಂದೆ ಸಾಹುಕಾರ್ ಎಂಬ ಬಿರುದು ಖಾಯಂ ಆಗಿ ಉಳಿದುಹೋಯಿತು.

ಸಾಹುಕಾರ್ ಜಾನಕಿ ಅವರ ಸುದೀರ್ಘ ವೃತ್ತಿಜೀವನದಲ್ಲಿ ಒಂದು ವಿಶಿಷ್ಟ ಹಾಗೂ ಅಪರೂಪದ ದಾಖಲೆಯಿದೆ. ಜಾನಕಿ ಜೊತೆ ನಟಿಸಿದ್ದ ನಾಲ್ಕು ಪ್ರಭಾವಿ ವ್ಯಕ್ತಿಗಳು ನಂತರ ರಾಜಕೀಯದಲ್ಲಿ ಯಶಸ್ಸು ಕಂಡು ಮುಖ್ಯಮಂತ್ರಿಗಳಾದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಎನ್.ಟಿ. ರಾಮರಾವ್ ಅವರೊಂದಿಗೆ ಜಾನಕಿ ಅಭಿನಯಿಸಿದ್ದರು.

ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಎಮ್.ಜಿ. ರಾಮಚಂದ್ರನ್, ಎಮ್. ಕರುಣಾನಿಧಿ ಹಾಗೂ ಜೆ. ಜಯಲಲಿತಾ ಅವರೊಂದಿಗೂ ಜಾನಕಿ ಅವರು ತೆರೆ ಹಂಚಿಕೊಂಡಿದ್ದರು. ಈ ನಾಲ್ವರ ಜೊತೆ ಒಂದೇ ಹಂತದಲ್ಲಿ ನಟಿಸಿದ್ದ ಇಂತಹ ಹೆಗ್ಗಳಿಕೆ ದಕ್ಷಿಣ ಭಾರತದ ಕಲಾಕ್ಷೇತ್ರದಲ್ಲೇ ಅತ್ಯಂತ ವಿಶೇಷವಾದುದು ಎಂದು ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನ: 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕಲಾವಿದೆ

400ಕ್ಕೂ ಹೆಚ್ಚು ಸಿನಿಮಾಗಳು:

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಸಾಹುಕಾರ್ ಜಾನಕಿ ಅವರು, ನಾಯಕಿಯಾಗಿ ಮಾತ್ರವಲ್ಲದೆ ಪ್ರಬಲ ಪೋಷಕ ಪಾತ್ರಗಳ ಮೂಲಕವೂ ಗಮನ ಸೆಳೆದಿದ್ದರು. ಚಿತ್ರರಂಗ ಮಾತ್ರವಲ್ಲದೆ ರೇಡಿಯೋ ಹಾಗೂ ರಂಗಭೂಮಿ ಕ್ಷೇತ್ರದಲ್ಲೂ ತಮ್ಮ ಅಭಿನಯದ ಛಾಪು ಮೂಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us