ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ (Vikran Rona) ಸಿನಿಮಾ ಗೆಲುವಿನ ನಗೆ ಬೀರಿದೆ. ಎಲ್ಲ ಕಡೆಗಳಲ್ಲಿ ಈ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಎಸ್ಎಸ್ ರಾಜಮೌಳಿ ಅವರಂತಹ ದಿಗ್ಗಜ ನಿರ್ದೇಶಕರು ಕೂಡ ಭೇಷ್ ಎಂದಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ಅವರ ವೃತ್ತಿಜೀವನದಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ಎಂಬ ಖ್ಯಾತಿಗೆ ‘ವಿಕ್ರಾಂತ್ ರೋಣ’ ಪಾತ್ರವಾಗಿದೆ. ಇದರಿಂದಾಗಿ ಸುದೀಪ್ ಅವರ ಮುಂಬರುವ ಸಿನಿಮಾಗಳ ಬಗ್ಗೆ ಇರುವ ನಿರೀಕ್ಷೆ ಹೆಚ್ಚಿದೆ. ಅಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದಿಂದ ಬರಲಿರುವ ಎಲ್ಲ ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಉತ್ತರ ಭಾರತದ ಮಂದಿ ಕಾಯುವಂತಾಗಿದೆ. ಆ ಪೈಕಿ ‘ಕಬ್ಜ’ ಚಿತ್ರದ (Kabza Movie) ಮೇಲೆ ಎಲ್ಲರ ಗಮನ ನೆಟ್ಟಿದೆ.
ಆರ್. ಚಂದ್ರು ಅವರು ‘ಕಬ್ಜ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಉಪೇಂದ್ರ ಹೀರೋ. ಅವರ ಜೊತೆ ಸುದೀಪ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ‘ಇಡೀ ಕಬ್ಜ ಸಿನಿಮಾ ಒಂದು ಬಂಗಾರದ ಕಿರೀಟವಾದರೆ ಅದರಲ್ಲಿ ಸುದೀಪ್ ಪಾತ್ರ ವಜ್ರದ ಹರಳು ಇದ್ದಂತೆ’ ಎಂದಿದ್ದಾರೆ ಆರ್. ಚಂದ್ರು. ‘ವಿಕ್ರಾಂತ್ ರೋಣ’ ಚಿತ್ರದ ಮೂಲಕ ಭರ್ಜರಿಯಾಗಿ ಸುದೀಪ್ ಅವರನ್ನು ತೆರೆಮೇಲೆ ನೋಡಿ ಎಂಜಾಯ್ ಮಾಡಿದ ಪ್ರೇಕ್ಷಕರು ‘ಕಬ್ಜ’ ಯಾವಾಗ ರಿಲೀಸ್ ಆಗಲಿದೆ ಎಂದು ಕಾಯುತ್ತಿದ್ದಾರೆ.
ಅದ್ದೂರಿ ಬಜೆಟ್, ರೆಟ್ರೋ ಕಾಲದ ಕಥೆ, ಘಟಾನುಘಟಿ ತಾರಾ ಬಳಗ, ಪ್ರಬಲ ತಂತ್ರಜ್ಞರ ತಂಡ.. ಹೀಗೆ ‘ಕಬ್ಜ’ ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ಈ ಸಿನಿಮಾ ಕೂಡ ಬಹುಭಾಷೆಯಲ್ಲಿ ಮೂಡಿಬರುತ್ತಿದೆ. ಉಪೇಂದ್ರ ಅವರ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಈ ಸಿನಿಮಾ ಕೂಡ ಕನ್ನಡದ ಕೀರ್ತಿ ಪತಾಕೆ ಹಾರಿಸಲಿದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದನ್ನು ನಿಜವಾಗಿಸುವ ಪ್ರಯತ್ನದಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ.
2022ರ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಸಖತ್ ಸ್ಪೆಷಲ್. ‘ಕೆಜಿಎಫ್: ಚಾಪ್ಟರ್ 2’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಈಗ ‘ವಿಕ್ರಾಂತ್ ರೋಣ’ ಧೂಳೆಬ್ಬಿಸುತ್ತಿದೆ. ಹಾಗಾಗಿ ಇದೇ ವರ್ಷವೇ ‘ಕಬ್ಜ’ ಕೂಡ ತೆರೆಕಾಣಲಿ ಎಂದು ಪ್ರೇಕ್ಷಕರು ಹಂಬಲಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ.