Vikrant Rona Piracy: ಸರ್ಕಾರಿ ಶಾಲೆಯಲ್ಲೇ ‘ವಿಕ್ರಾಂತ್ ರೋಣ’ ಪೈರಸಿ; ಮಕ್ಕಳಿಗೆ ಸಿನಿಮಾ ತೋರಿಸಿದ ವಿಡಿಯೋ ವೈರಲ್
Kichcha Sudeep | Vikrant Rona: ವಸತಿ ಶಾಲೆಯ ಮಕ್ಕಳಿಗೆ ಅಲ್ಲಿನ ಸಿಬ್ಬಂದಿಯೇ ಪೈರಸಿ ಸಿನಿಮಾ ತೋರಿಸಿದ್ದಾರೆ ಎನ್ನಲಾಗಿದೆ. ಮಕ್ಕಳೆಲ್ಲರೂ ‘ವಿಕ್ರಾಂತ್ ರೋಣ’ ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಪೈರಸಿ ಪಿಡುಗಿನ ವಿರುದ್ಧ ಚಿತ್ರರಂಗ ಫೈಟ್ ಮಾಡುತ್ತಿದೆ. ಸಿನಿಮಾವನ್ನು ಪೈರಸಿ ಮಾಡುವುದು ಮತ್ತು ಅದನ್ನು ನೋಡುವುದು ಕೂಡ ತಪ್ಪು ಎಂಬ ತಿಳಿವಳಿಕೆ ಎಲ್ಲರಲ್ಲೂ ಮೂಡಬೇಕಿದೆ. ಸರಿ-ತಪ್ಪುಗಳ ಬಗ್ಗೆ ಮಕ್ಕಳಿಗೂ ಜಾಗೃತಿ ಮೂಡಿಸುವುದು ಅತ್ಯಗತ್ಯ. ಆದರೆ ಸರ್ಕಾರಿ ಶಾಲೆಯಲ್ಲೇ ವಿಕ್ರಾಂತ್ ರೋಣ (Vikrant Rona) ಸಿನಿಮಾ ಪೈರಸಿ ಆಗಿರುವುದು ವಿಪರ್ಯಾಸ! ಮುಳಬಾಗಿಲು ಸರ್ಕಾರಿ ವಸತಿ ಶಾಲೆಯೊಂದರ ವಿದ್ಯಾರ್ಥಿಗಳಿಗೆ ‘ವಿಕ್ರಾಂತ್ ರೋಣ’ ಸಿನಿಮಾದ ಪೈರಸಿ (Vikrant Rona Piracy) ಕಾಪಿಯನ್ನು ತೋರಿಸಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ತಪ್ಪಿತಸ್ಥರು ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಕೃತ್ಯ ಎಸಗಿದವರು ಕ್ಷಮೆ ಕೇಳಬೇಕು, ಇಲ್ಲವೇ ಕಾನೂನಿನ ಪ್ರಕಾರ ಶಿಕ್ಷೆ ಪಡೆಯಬೇಕು ಎಂದು ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.
ಜುಲೈ 28ರಂದು ‘ವಿಕ್ರಾಂತ್ ರೋಣ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಯಿತು. ಮೊದಲ ದಿನ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತು. ಎರಡನೇ ದಿನವಾದ ಶುಕ್ರವಾರ ಹಾಗೂ ವೀಕೆಂಡ್ ದಿನಗಳಲ್ಲಿ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ‘ವಿಕ್ರಾಂತ್ ರೋಣ’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಆದರೆ ಅದರ ನಡುವೆಯೇ ಪೈರಸಿ ಕಾಟ ತಲೆದೂರಿದೆ. ಚಿತ್ರದ ನಕಲಿ ಪ್ರತಿ ಅನೇಕ ಕಡೆಗಳಲ್ಲಿ ಓಡಾಡುತ್ತಿದೆ.
ವಸತಿ ಶಾಲೆಯ ಮಕ್ಕಳಿಗೆ ಅಲ್ಲಿನ ಸಿಬ್ಬಂದಿಯೇ ಪೈರಸಿ ಸಿನಿಮಾ ತೋರಿಸಿದ್ದಾರೆ ಎನ್ನಲಾಗಿದೆ. ಮಕ್ಕಳೆಲ್ಲರೂ ‘ವಿಕ್ರಾಂತ್ ರೋಣ’ ಚಿತ್ರ ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಶಾಲೆಯ ಸಿಬ್ಬಂದಿಗೆ ಕಿಚ್ಚ ಸುದೀಪ್ ಅಭಿಮಾನಿಗಳು ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪು ಮಾಡಿದವರು ವಿಡಿಯೋ ಮೂಲಕ ಕ್ಷಮೆ ಯಾಚಿಸಬೇಕು ಅಥವಾ ಕಾನೂನಿನ ಕಠಿಣ ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.
ಅನೂಪ್ ಭಂಡಾರಿ ಅವರು ‘ವಿಕ್ರಾಂತ್ ರೋಣ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್, ನೀತಾ ಅಶೋಕ್ ಮುಂತಾದವರು ಸುದೀಪ್ ಜೊತೆ ನಟಿಸಿದ್ದಾರೆ. ಎಲ್ಲ ವಯೋಮಾನದ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗುತ್ತಿದೆ. ಮಕ್ಕಳಿಗೆ ಹೆಚ್ಚು ಇಷ್ಟ ಆಗುತ್ತಿದೆ. ಆ ಕಾರಣದಿಂದಲೂ ‘ವಿಕ್ರಾಂತ್ ರೋಣ’ನ ಹೈಪ್ ಹೆಚ್ಚಾಗಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಮುಂತಾದ ಭಾಷೆಗಳಿಗೆ ಡಬ್ ಆಗಿಯೂ ಈ ಸಿನಿಮಾ ರಿಲೀಸ್ ಆಗಿದೆ.