Vikrant Rona: ‘ವಿಕ್ರಾಂತ್ ರೋಣ’ ಚಿತ್ರ ಮೆಚ್ಚಿದ ರಾಜಮೌಳಿ; ಸ್ಟಾರ್ ನಿರ್ದೇಶಕನ ಗಮನ ಸೆಳೆದಿದೆ ಒಂದು ವಿಶೇಷ ಪಾತ್ರ
Rajamouli | Kichcha Sudeep: ಎಸ್ಎಸ್ ರಾಜಮೌಳಿ ಅವರಿಗೆ ‘ವಿಕ್ರಾಂತ್ ರೋಣ’ ಸಿನಿಮಾ ತುಂಬ ಇಷ್ಟ ಆಗಿದೆ. ಅವರ ಮಾತುಗಳಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದ ‘ವಿಕ್ರಾಂತ್ ರೋಣ’ (Vikrant Rona) ಚಿತ್ರ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿರುವ ಈ ಚಿತ್ರವನ್ನು ಹೊರರಾಜ್ಯದ ಮಂದಿ ಇಷ್ಟಪಟ್ಟಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದಿಂದ ಕಿಚ್ಚ ಸುದೀಪ್ (Kichcha Sudeep) ವೃತ್ತಿಜೀವನಕ್ಕೆ ಹೊಸ ಮೈಲೇಜ್ ಸಿಕ್ಕಿದೆ. ಇಡೀ ತಂಡದ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕುತ್ತಿದೆ. ಬಾಕ್ಸ್ ಆಫೀಸ್ನಲ್ಲೂ ಉತ್ತಮ ಕಮಾಯಿ ಆಗುತ್ತಿದೆ. ಈಗ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರು ‘ವಿಕ್ರಾಂತ್ ರೋಣ’ ಚಿತ್ರವನ್ನು ನೋಡಿದ್ದಾರೆ. ಸಿನಿಮಾ ವೀಕ್ಷಿಸಿ ಖುಷಿಪಟ್ಟಿರುವ ಅವರು ಟ್ವಿಟರ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಭಾಸ್ಕರ್ ಎಂಬ ಪಾತ್ರದ ಬಗ್ಗೆ ಅವರು ವಿಶೇಷವಾಗಿ ಪ್ರಸ್ತಾಪ ಮಾಡಿದ್ದಾರೆ.
ರಾಜಮೌಳಿ ಮತ್ತು ಕಿಚ್ಚ ಸುದೀಪ್ ನಡುವೆ ಅನೇಕ ವರ್ಷಗಳಿಂದ ಸ್ನೇಹ ಇದೆ. ‘ಈಗ’, ‘ಬಾಹುಬಲಿ’ ಸಿನಿಮಾಗಳಲ್ಲಿ ಅವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ‘ವಿಕ್ರಾಂತ್ ರೋಣ’ ಚಿತ್ರವನ್ನು ರಾಜಮೌಳಿ ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇದರಿಂದಾಗಿ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ. ತೆಲುಗು ಪ್ರೇಕ್ಷಕರ ವಲಯದಲ್ಲಿ ‘ವಿಕ್ರಾಂತ್ ರೋಣ’ ಬಗ್ಗೆ ಕ್ರೇಜ್ ಜಾಸ್ತಿ ಆಗಿದೆ.
‘ವಿಕ್ರಾಂತ್ ರೋಣ ಸಿನಿಮಾದ ಗೆಲುವಿಗಾಗಿ ಕಿಚ್ಚ ಸುದೀಪ್ ಅವರಿಗೆ ಅಭಿನಂದನೆಗಳು. ಈ ರೀತಿ ಕಥೆಯನ್ನು ಆಯ್ಕೆ ಮಾಡಿಕೊಳ್ಳಲು ಧೈರ್ಯ ಮತ್ತು ನಂಬಿಕೆ ಬೇಕು. ನಿಮ್ಮ ಕಾರ್ಯಕ್ಕೆ ಯಶಸ್ಸು ಸಿಕ್ಕಿದೆ. ಈ ಚಿತ್ರದಲ್ಲಿ ಪ್ರೀ-ಕ್ಲೈಮ್ಯಾಕ್ಸ್ ದೃಶ್ಯ ತುಂಬ ಮಹತ್ವದಾಗಿದೆ. ಗುಡ್ಡಿಯ ಸ್ನೇಹಿತ ಭಾಸ್ಕರ್ ಬಗ್ಗೆ ವಿಶೇಷವಾಗಿ ಹೇಳಲೇಬೇಕು’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ. ಸಿನಿಮಾದಲ್ಲಿ ಭಾಸ್ಕರ್ ಎಂಬ ಪಾತ್ರ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ವಿಶೇಷವಾಗಿರುವ ಆ ಪಾತ್ರದ ಬಗ್ಗೆ ತಿಳಿಯಲು ಸಿನಿಮಾ ನೋಡಬೇಕು.
Thank you @ssrajamouli sir. Extremely honoured to hear these lines from you. A big thanks and a hug from all of us ❤️? ,,, including Bhaskar? https://t.co/bGZ0RtJTYh
— Kichcha Sudeepa (@KicchaSudeep) July 31, 2022
ರಾಜಮೌಳಿ ಅವರ ಮಾತುಗಳಿಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ‘ಧನ್ಯವಾದಗಳು ಸರ್. ನಿಮ್ಮಿಂದ ಈ ಮಾತುಗಳನ್ನು ಕೇಳಲು ಹೆಮ್ಮೆ ಆಗುತ್ತದೆ. ಭಾಸ್ಕರ್ ಸೇರಿದಂತೆ ನಮ್ಮ ಇಡೀ ತಂಡದಿಂದ ನಿಮಗೆ ಧನ್ಯವಾದ ಮತ್ತು ಪ್ರೀತಿಯ ಅಪ್ಪುಗೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
3ಡಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಹಾಡುಗಳಿಂದ ಈ ಚಿತ್ರದ ಮೆರುಗು ಹೆಚ್ಚಿದೆ.