
ದರ್ಶನ್ (Darshan) ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ವರ್ಷಗಳಿಂದಲೂ ಫ್ಯಾನ್ಸ್ ವಾರ್ ನಡೆಯುತ್ತಲೇ ಇದೆ. ಆದರೆ ಸುದೀಪ್ ಇದಕ್ಕೆಲ್ಲ ಹೆಚ್ಚು ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ ತಮ್ಮ ಸಿನಿಮಾಕ್ಕೆ ಬೆದರಿಕೆಗಳು ಬಂದಾಗ ಪರೋಕ್ಷವಾಗಿ ಸುದೀಪ್ ಅವರು ಎಚ್ಚರಿಕೆ ನೀಡಿದರು. ಸುದೀಪ್ ಅವರ ಸಣ್ಣ ಹೇಳಿಕೆಯನ್ನೇ ದೊಡ್ಡದು ಮಾಡಿ ಇದೀಗ ಫ್ಯಾನ್ಸ್ಗಳ ಜೊತೆಗೆ ದರ್ಶನ್ ಆಪ್ತರು ಸಹ ಅಖಾಡಕ್ಕಿಳಿದು ಫ್ಯಾನ್ಸ್ ವಾರ್ ಬೆಂಕಿಗೆ ತುಪ್ಪ ಸುರಿದಿದ್ದಾರೆ. ದರ್ಶನ್ ಅವರ ಪರಮಾಪ್ತ ಧನ್ವೀರ್ ಗೌಡ, ‘ಕಾಡಿನಲ್ಲಿ ಸಾಕಷ್ಟು ಪ್ರಾಣಿಗಳಿರುತ್ತವೆ, ಆದರೆ ಸಿಂಹ ಮಾತ್ರವೇ ಕಾಡಿನ ರಾಜ’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಧನ್ವೀರ್ ಅವರ ಈ ಪೋಸ್ಟ್ ಸುದೀಪ್ ಅವರ ಬಗ್ಗೆಯೇ ಎಂಬುದು ಎಂಥವರಿಗೂ ಅರ್ಥವಾಗುವಂತಿತ್ತು, ಇದೀಗ ಧನ್ವೀರ್ಗೆ ಟಾಂಗ್ ಕೊಟ್ಟಿದ್ದಾರೆ ಸುದೀಪ್ ಆಪ್ತ ವಿನಯ್ ಗೌಡ.
ವಿನಯ್ ಗೌಡ ಅವರು, ಧನ್ವೀರ್ ಅವರ ಪೋಸ್ಟ್ಗೆ ಎದುರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಕಾಡಿನ ರಾಜ ಸಿಂಹ ಎಂಬುದು ಗೊತ್ತು, ಆದರೆ ಆ ಸಿಂಹ ಸುದೀಪ್’ ಎಂದಿದ್ದಾರೆ. ಆ ಮೂಲಕ ದರ್ಶನ್ ಅನ್ನು ಸಿಂಹವೆಂದಿದ್ದ ಧನ್ವೀರ್ಗೆ ನೇರವಾಗಿ ಕೌಂಟರ್ ಕೊಟ್ಟಿದ್ದಾರೆ ವಿನಯ್ ಗೌಡ. ಆ ಮೂಲಕ ಸುದೀಪ್ ಪರವಾಗಿ ನಿಂತಿದ್ದಾರೆ ವಿನಯ್ ಗೌಡ.
ಅಸಲಿಗೆ ವಿನಯ್ ಗೌಡ ಅವರು, ದರ್ಶನ್ ನಟಿಸಿರುವ ‘ಡೆವಿಲ್’ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಸಿನಿಮಾದ ಪ್ರಚಾರಕ್ಕೆ ಅವರು ಹೋಗಿರಲಿಲ್ಲ. ಚಿತ್ರತಂಡದ ಜೊತೆಗೆ ವಿಶೇಷವಾಗಿ ದರ್ಶನ್ ಜೊತೆಗಿನ ಮನಸ್ಥಾಪವೇ ಇದಕ್ಕೆ ಕಾರಣ ಎಂಬ ಮಾತುಗಳು ಸಹ ಅಲ್ಲಲ್ಲಿ ಕೇಳಿ ಬಂದಿತ್ತು. ಆದರೆ ಖಾಸಗಿ ಕಾರಣಕ್ಕಾಗಿ ತಾವು ಪ್ರಚಾರಕ್ಕೆ ಹೋಗಿಲ್ಲ ಎಂದು ವಿನಯ್ ಹೇಳಿಕೊಂಡಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ವಿನಯ್ ಗೌಡ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ‘ಡೆವಿಲ್’ ಸಿನಿಮಾ ಕುರಿತಾಗಿ ಒಂದೇ ಒಂದು ಪೋಸ್ಟ್ ಸಹ ಹಂಚಿಕೊಂಡಿಲ್ಲ.
ಇದನ್ನೂ ಓದಿ:‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು
‘ಡೆವಿಲ್’ ಸಿನಿಮಾ ತಂಡ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆಯೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದ ವಿನಯ್ ಗೌಡ, ‘ನಾನು ಪೇಯ್ಡ್ ಆಕ್ಟರ್, ಸಂಭಾವನೆ ಕೊಟ್ಟರು ನಟಿಸಿದ್ದೀನಿ. ‘ಡೆವಿಲ್’ ಸಿನಿಮಾನಲ್ಲಿ ನನಗೆ ಎಷ್ಟು ಸ್ಕೋಪ್ ಇದೆ ಎಂದು ಎಲ್ಲರೂ ನೋಡಿದ್ದಾರೆ. ಬುಕ್ ಮೈ ಶೋನಲ್ಲಿ ‘ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಎಲ್ಲರ ಹೆಸರಿದೆ, ಆದರೆ ನನ್ನ ಹೆಸರಿಲ್ಲ. ಇನ್ನು ದರ್ಶನ್ ಅವರ ಬಗ್ಗೆ ನಾನು ಮಾತನಾಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಮಾತನಾಡಬಾರದು ಎಂದೇ ನಾನು ಮಾತನಾಡಿಲ್ಲ. ನಾನು ಮಾತನಾಡಿ ಅವರಿಗೆ ಕಾನೂನಾತ್ಮಕವಾಗಿ ಏನಾದರೂ ಸಮಸ್ಯೆ ಆಗುವುದು ಸರಿಯಲ್ಲ ಎಂದು ಸುಮ್ಮನಿದ್ದೇನೆ’ ಎಂದಿದ್ದಾರೆ ವಿನಯ್ ಗೌಡ.
ವಿನಯ್ ಗೌಡ ಅವರು, ಸುದೀಪ್ ಅವರ ಆಪ್ತರಲ್ಲಿ ಒಬ್ಬರು. ಬಿಗ್ಬಾಸ್ ಸ್ಪರ್ಧಿಯಾಗಿದ್ದ ವಿನಯ್ ಅವರು ಅಲ್ಲಿ ಸುದೀಪ್ ಅವರ ಗೆಳೆತನ ಗಳಿಸಿದರು. ಇದೀಗ ಸುದೀಪ್ ವಿರುದ್ಧ ಕೆಲವರು ವಿನಾಕಾರಣ ಪೋಸ್ಟ್ಗಗಳನ್ನು ಹಂಚಿಕೊಳ್ಳುತ್ತಿರುವಾಗ ಸಹಜವಾಗಿಯೇ ವಿನಯ್ ಅವರು ಸುದೀಪ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:36 am, Wed, 24 December 25