
ಸುದೀಪ್ (Sudeep) ಅವರು ಕೆಲ ದಿನಗಳ ಹಿಂದೆ ‘ಮಾರ್ಕ್’ ಸಿನಿಮಾ ಕಾರ್ಯಕ್ರಮದಲ್ಲಿ ಪೈರಸಿ ವಿರುದ್ಧ ಹೋರಾಟದ ಬಗ್ಗೆ ಆಡಿದ ಮಾತು ಏನೇನೋ ಅರ್ಥ ರೂಪ ಪಡೆದು ಇದೀಗ ಫ್ಯಾನ್ಸ್ ವಾರ್ ಮಟ್ಟಕ್ಕೆ ಬಂದು ನಿಂತಿದೆ. ಪೈರಸಿ ವಿರುದ್ಧ, ದುರುದ್ದೇಶದಿಂದ ಪೈರಸಿ ಮಾಡುವ ಪಡೆಗಳ ವಿರುದ್ಧ ಯುದ್ಧ ಮಾಡಬೇಕಿದೆ ಎಂಬರ್ಥದ ಮಾತುಗಳನ್ನು ಸುದೀಪ್ ಆಡಿದ್ದರು. ದರ್ಶನ್ ಅಭಿಮಾನಿಗಳ ಬಗ್ಗೆಯೇ ಸುದೀಪ್ ಆ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಸುದೀಪ್ ಅವರ ಮಾತುಗಳಿಗೆ ಧ್ರುವ ಸರ್ಜಾ ಪ್ರತಿಕ್ರಿಯೆ ಹೇಗಿತ್ತು ಎಂದು ನಿರ್ದೇಶಕ ಪ್ರೇಮ್ ವಿವರಿಸಿದ್ದಾರೆ.
ಧ್ರುವ ಸರ್ಜಾ ಅವರು ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯ ಹಂತದಲ್ಲಿದೆ ಎನ್ನಲಾಗುತ್ತಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಇದೀಗ ಪ್ರೇಮ್ ಅವರು ಟಿವಿ9ಗೆ ಸಂದರ್ಶನ ನೀಡಿದ್ದು, ಸುದೀಪ್ ಅವರ ಮಾತಿಗೆ ಧ್ರುವ ಸರ್ಜಾ ಪ್ರತಿಕ್ರಿಯೆ ಏನಿತ್ತು ಎಂಬುದನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ.
‘ಸುದೀಪ್ ಅವರ ಮಾತುಗಳನ್ನು ಕೇಳಿ, ಧ್ರುವ ಸರ್ಜಾ ನನಗೆ ಫೋನ್ ಮಾಡಿದ್ದರು. ಪ್ರೇಮ್ ಅವರೇ, ಸುದೀಪ್ ಅವರು ಹೀಗೆ ಹೇಳಿದ್ದಾರೆ. ಪೈರಸಿ ವಿರುದ್ಧ ಯುದ್ಧ ಮಾಡಬೇಕು ಎಂದಿದ್ದಾರೆ. ನಮ್ಮ ಸಿನಿಮಾಕ್ಕೂ ಪೈರಸಿಕೋರರು ಕಾಟ ಕೊಡಬಹುದು ನಾವು ಸಹ ಎಲ್ಲ ರೀತಿಯಲ್ಲಿಯೂ ಸಿದ್ಧವಾಗಿರಬೇಕು. ನಾವೂ ಸಹ ಹೋರಾಟ ಮಾಡಬೇಕು’ ಎಂದು ಹೇಳಿದರು. ನಾನು ಸಹ ಖಂಡಿತ ಅದರ ವಿರುದ್ಧ ಹೋರಾಟ ಮಾಡೋಣ ಎಂದೆ’ ಎಂದು ಪ್ರೇಮ್ ಹೇಳಿದ್ದಾರೆ.
ಅಸಲಿಗೆ ಧ್ರುವ ಸರ್ಜಾ ಹಾಗೂ ದರ್ಶನ್ ನಡುವೆಯೂ ಸಂಬಂಧ ಹಳಸಿದೆ. ದರ್ಶನ್ ಅವರು ಜೈಲಿಗೆ ಹೋಗುವ ಮುಂಚೆಯೇ ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಸಂಬಂಧದಲ್ಲಿ ಬಿರುಕು ಮೂಡಿತ್ತು. ಅರ್ಜುನ್ ಸರ್ಜಾ ನಿರ್ದೇಶಿಸಿದ್ದ ‘ಪ್ರೇಮ ಬರಹ’ ಸಿನಿಮಾನಲ್ಲಿ ದರ್ಶನ್, ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ವಿತರಣೆಯನ್ನೂ ಮಾಡಿದ್ದರು. ಆದರೆ ಆ ಸಿನಿಮಾದ ಹಣಕಾಸು ವಿಚಾರದಲ್ಲಿ ಸರ್ಜಾ ಹಾಗೂ ದರ್ಶನ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಈ ಬಗ್ಗೆ ಧ್ರುವ ಸರ್ಜಾ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದೇ ಕಾರಣಕ್ಕೆ ಧ್ರುವ ಸರ್ಜಾ ಅವರಿಗೂ ಸಹ ತಮ್ಮ ‘ಕೆಡಿ’ ಸಿನಿಮಾದ ಮೇಲೂ ಪೈರಸಿಕೋರರ ಕಣ್ಣು ಬೀಳಬಹುದೆಂಬ ಭಯ ಇದ್ದಂತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ