
ನಿನ್ನೆ (ಅಕ್ಟೋಬರ್ 30) ಹಾಡಹಗಲೆ ರೋಹಿತ್ ಆರ್ಯ (Rohit Arya) ಹೆಸರಿನ ವ್ಯಕ್ತಿಯೊಬ್ಬ 17 ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ. ಹದಿನೇಳು ಮಕ್ಕಳ ಜೊತೆಗೆ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನೂ ಸಹ ಒತ್ತೆಯಾಳಾಗಿ ಇದ್ದ. ಮುಂಬೈನ ಪವಾಯ್ನಲ್ಲಿರುವ ಆರ್ಎ ಸ್ಟುಡಿಯೋನಲ್ಲಿ ರೋಹಿತ್ ಆರ್ಯ ಮಕ್ಕಳನ್ನು ಒತ್ತೆ ಆಳಾಗಿ ಇರಿಸಿಕೊಂಡಿದ್ದ. ಆದರೆ ಪೊಲೀಸರ ಗುಂಡೇಟಿನಿಂದ ರೋಹಿತ್ ಆರ್ಯ ನಿಧನ ಹೊಂದಿದ್ದಾನೆ. ಆದರೆ ಈ ರೋಹಿತ್ ಯಾರು? ಆತ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದು ಹೇಗೆ? ಆತನ ಬೇಡಿಕೆಗಳು ಏನಾಗಿದ್ದವು? ಇಲ್ಲಿದೆ ಪೂರ್ಣ ಮಾಹಿತಿ…
ರೋಹಿತ್ ಆರ್ಯ ಒಬ್ಬ ಸಾಮಾಜಿಕ ಕಾರ್ಯಕರ್ತ, ಸಿನಿಮಾ ನಿರ್ದೇಶಕ ಮತ್ತು ಬರಹಗಾರ ಆಗಿದ್ದ. ರೋಹಿತ್ ಆರ್ಯ, ‘ಲೆಟ್ಸ್ ಚೇಂಜ್’ ಹೆಸರಿನ ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದ. ಅದಕ್ಕೂ ಮುಂಚೆ ‘ಸ್ವಾಭಿಮಾನ್’, ‘ಏ ಸಚ್ಚಾ ಸ್ವಾಭಿಮಾನ್ ಸಹಿ ಸಂಘರ್ಷ್’ ಎಂಬ ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದರು. ‘ಲೆಟ್ಸ್ ಚೇಂಜ್’ ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು. ಅದೇ ಸಮಯದಲ್ಲಿ ಮಹಾರಾಷ್ಟ್ರ ಸರ್ಕಾರ ‘ಮಾಜ ಶಾಲ, ಸುಂದರ ಶಾಲ’ (ನನ್ನ ಶಾಲೆ ಸುಂದರ ಶಾಲೆ) ಹೆಸರಿನ ಕಾರ್ಯಕ್ರಮವೊಂದನ್ನು ರೂಪಿಸಿತು. ಈ ಕಾರ್ಯಕ್ರಮವು ತಮ್ಮ ‘ಲೆಟ್ಸ್ ಚೇಂಜ್’ ಸಿನಿಮಾದಿಂದ ಸ್ಪೂರ್ತಿ ಪಡೆದು ನಿರ್ಮಿಸಿದ ಕಾರ್ಯಕ್ರಮವಾಗಿದ್ದು, ಸರ್ಕಾರವು ತಮಗೆ ನೀಡಬೇಕಿದ್ದ ಮನ್ನಣೆಯನ್ನು ನೀಡಿಲ್ಲವೆಂದು ರೋಹಿತ್ ಆಕ್ಷೇಪಿಸಿದ್ದರು.
ಇದನ್ನೂ ಓದಿ:ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿಯ ಎನ್ಕೌಂಟರ್
ಬಳಿಕ ರೋಹಿತ್ 2023 ರಲ್ಲಿ ಸ್ವಚ್ಛತಾ ಮಾನಿಟರ್ ಹೆಸರಿನ ಕಾರ್ಯಕ್ರಮ ಮಾಡಿದರು. ಆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಣವನ್ನು ಸರ್ಕಾರ ತಮಗೆ ನೀಡಿಲ್ಲ ಎಂದು ರೋಹಿತ್ ಆರೋಪಿಸಿದ್ದರು. ಮಾಜಿ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಮನೆಯ ಎದುರು ಧರಣಿ ಸತ್ಯಾಗ್ರಹಗಳನ್ನು ಸಹ ರೋಹಿತ್ ಆರ್ಯನ್ ಮಾಡಿದ್ದರು. ಆ ಸಂದರ್ಭದಲ್ಲಿ ಪರೋಕ್ಷವಾಗಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ ರೋಹಿತ್, ‘ನನಗೆ ಏನಾದರೂ ಆದರೆ ದೀಪಕ್ ಕೇಸರ್ಕರ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೇ ಕಾರಣ’ ಎಂದಿದ್ದರು.
ಇನ್ನು ರೋಹಿತ್, ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಆರ್ಎ ಸ್ಟುಡಿಯೋ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ವೆಬ್ ಸರಣಿ ನಿರ್ದೇಶಿಸುತ್ತಿರುವಾಗಿ ಹೇಳಿ ಮಕ್ಕಳನ್ನು ಆಡಿಷನ್ಗೆ ಕರೆದಿದ್ದ, ನಾಲ್ಕು ದಿನಗಳ ಆಡಿಷನ್ ಎಂದು ಪೋಷಕರಿಗೆ ಹೇಳಿದ್ದ. ಅದರಂತೆ ಸುಮಾರು 15 ವರ್ಷದವರೆಗಿನ ಮಕ್ಕಳನ್ನು ಸ್ಟುಡಿಯೋಗೆ ಕರೆಸಿ ಸ್ಟುಡಿಯೋದ ಒಳಗೆ ಅವರನ್ನು ಬಂಧಿ ಮಾಡಿದ್ದ. ಆತನ ಬಳಿ ಒಂದು ಏರ್ಗನ್ ಮತ್ತು ಕೆಲವು ರಾಸಾಯನಿಕಗಳು ಹಾಗೂ ಲೈಟರ್ ಇತ್ತೆಂದು ಪೊಲೀಸರು ಹೇಳಿದ್ದಾರೆ.
ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಬಾತ್ರೂಂ ಮೂಲಕ ಒಳಗೆ ಹೋಗಿ ರೋಹಿತ್ ಆರ್ಯನ್ ಜೊತೆ ಮಾತನಾಡುವ ಪ್ರಯತ್ನ ಮಾಡಿದ್ದಾರೆ, ಆದರೆ ಆತ ಏರ್ಗನ್ ಮೂಲಕ ದಾಳಿ ಮಾಡಲು ಯತ್ನಿಸಿದಾಗ ಪೊಲೀಸ್ ಅಧಿಕಾರಿ ಶೂಟ್ ಮಾಡಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ