ಮಂಗ್ಲಿ ಕಾರು ಅಪಘಾತದ ವದಂತಿ; ಅಸಲಿ ವಿಷಯ ಏನೆಂದು ತಿಳಿಸಿದ ಗಾಯಕಿ

|

Updated on: Mar 18, 2024 | 10:53 PM

ಗಾಯಕಿ ಮಂಗ್ಲಿ ಅವರ ಕಾರು ಅಪಘಾತಕ್ಕೆ ಒಳಗಾಗಿದ್ದು ನಿಜ. ಆದರೆ ಆ ಅಪಘಾತದ ವಿವರಗಳ ಬಗ್ಗೆ ಒಂದಷ್ಟು ಗಾಸಿಪ್​ ಹಬ್ಬಿದೆ. ಇದರಿಂದ ಅವರ ಅಭಿಮಾನಿಗಳಿಗೆ ಆತಂಕ ಆಗಿತ್ತು. ಹಾಗಾಗಿ ಸ್ವತಃ ಮಂಗ್ಲಿ ಅವರು ಅಸಲಿ ವಿಷಯ ಏನು ಎಂಬುದನ್ನು ತಿಳಿಸಿದ್ದಾರೆ. ‘ಸಣ್ಣ ಆ್ಯಕ್ಸಿಡೆಂಟ್​ ಆಗಿದ್ದು ಹೌದು. ಆದರೆ ಗಾಸಿಪ್​ಗಳಿಗೆ ಕಿವಿಗೊಡಬೇಡಿ’ ಎಂದು ಅವರು ಹೇಳಿದ್ದಾರೆ.

ಮಂಗ್ಲಿ ಕಾರು ಅಪಘಾತದ ವದಂತಿ; ಅಸಲಿ ವಿಷಯ ಏನೆಂದು ತಿಳಿಸಿದ ಗಾಯಕಿ
ಮಂಗ್ಲಿ
Follow us on

ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸೂಪರ್​ ಹಿಟ್​ ಹಾಡುಗಳನ್ನು ಹಾಡುವ ಮೂಲಕ ಫೇಮಸ್​ ಆಗಿರುವ ಗಾಯಕಿ ಮಂಗ್ಲಿ (Singer Mangli) ಬಗ್ಗೆ ಒಂದು ಸುದ್ದಿ ವೈರಲ್​ ಆಗಿದೆ. ಮಂಗ್ಲಿ ಅವರ ಕಾರು ಅಪಘಾತಕ್ಕೆ ಒಳಗಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆ ಕುರಿತಂತೆ ಈಗ ಸ್ವತಃ ಮಂಗ್ಲಿ (Mangli) ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಂತ ಅವರಿಗೆ ಆ್ಯಕ್ಟಿಡೆಂಟ್​ (Mangli Car Accident) ಆಗಿಯೇ ಇಲ್ಲ ಅಂತೇನೂ ಅಲ್ಲ. ಆದರೆ ಮಾಧ್ಯಮಗಳಲ್ಲಿ ಅಪಘಾತ ನಡೆದ ದಿನಾಂಕ ಮತ್ತು ಅಪಘಾತದ ತೀವ್ರತೆ ಬಗ್ಗೆ ತಪ್ಪು ಮಾಹಿತಿ ಹಬ್ಬಿದೆ. ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

‘ನಾನು ಸುರಕ್ಷಿತವಾಗಿದ್ದೇನೆ. ಅದು ಎರಡು ದಿನಗಳ ಹಿಂದೆ ನಡೆದ ಒಂದು ಚಿಕ್ಕ ಅಪಘಾತ. ಅದರ ಬಗ್ಗೆ ಹಬ್ಬಿರುವ ವದಂತಿಗಳನ್ನು ನಂಬಬೇಡಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಮಂಗ್ಲಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಂಗ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಪೋಸ್ಟ್​ ನೋಡಿದ ಬಳಿಕ ಅಭಿಮಾನಿಗಳಿಗೆ ಸಮಾಧಾನ ಆಗಿದೆ.

ಮಾರ್ಚ್​ 17ರ ರಾತ್ರಿಯೇ ಮಂಗ್ಲಿ ಅವರ ಕಾರು ಅಪಘಾತ ಆಗಿದೆ ಎಂದು ವರದಿ ಆಗಿತ್ತು. ಆದರೆ ಆ ಮಾಹಿತಿ ನಿಜವಲ್ಲ ಎಂದು ಅವರು ಈ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ‘ರಂಗಾ ರೆಡ್ಡಿ ಜಿಲ್ಲೆಯ ನಂದಿಗ್ರಾಮದ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಗಾಯಕಿ ಮಂಗ್ಲಿ ಭಾಗವಹಿಸಿದ್ದರು. ಆ ನಂತರ ಅವರು ವಾಪಸ್​ ಹೈದರಾಬಾದ್​ಗೆ ಬರುತ್ತಿದ್ದರು. ಶಂಶಾಬಾದ್ ತೊಂಡುಪಲ್ಲಿ ಸಮೀಪ ಅವರ ಕಾರು ಅಪಘಾತಕ್ಕೆ ಒಳಗಾಯಿತು. ಕಾರಿಗೆ ಟ್ರಕ್ ಗುದ್ದಿದೆ’ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಪಘಾತದ ಕುರಿತು ಇನ್ನೂ ಹೆಚ್ಚಿನ ಗಾಳಿಸುದ್ದಿ ಹಬ್ಬುವುದಕ್ಕೂ ಮುನ್ನ ಸ್ವತಃ ಮಂಗ್ಲಿ ಅವರೇ ವಿವರ ನೀಡಿದ್ದಾರೆ.

ಇದನ್ನೂ ಓದಿ: ಗಾಯಕಿ ಮಂಗ್ಲಿ ಮಾಡೆಲ್ ಆಗಿದ್ದು ಯಾವಾಗ? ಇಲ್ಲಿವೆ ಮಂಗ್ಲಿಯ ಹೊಸ ಚಿತ್ರಗಳು

ಸೋಶಿಯಲ್ ಮೀಡಿಯಾದಲ್ಲಿ ಮಂಗ್ಲಿ ಅವರು ಆ್ಯಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 9 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ತಾವು ಸೇಫ್​ ಆಗಿರುವುದಾಗಿ ಮಂಗ್ಲಿ ಹಾಕಿರುವ ಪೋಸ್ಟ್​ಗೆ ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ‘ಶಿವನ ಆಶೀರ್ವಾದ ನಿಮ್ಮ ಮೇಲಿದೆ’ ಎಂದು ಅನೇಕರು ಹೇಳಿದ್ದಾರೆ. ‘ನಿಮ್ಮ ಬಗ್ಗೆ ಕಾಳಜಿ ವಹಿಸಿ. ಆದಷ್ಟು ಬೇಗ ಚೇತರಿಸಿಕೊಳ್ಳಿ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಸಿನಿಮಾ ಹಾಡುಗಳ ಜೊತೆ ಅನೇಕ ಭಕ್ತಿಗೀತೆಗಳನ್ನು ಕೂಡ ಮಂಗ್ಲಿ ಹಾಡಿದ್ದಾರೆ. ಆ ಮೂಲಕವೂ ಅವರು ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ.

ಮಂಗ್ಲಿ ಇನ್​ಸ್ಟಾಗ್ರಾಮ್​ ಪೋಸ್ಟ್:

ತೆಲುಗಿನಲ್ಲಿ ಫೇಮಸ್​ ಆದ ಬಳಿಕ ಮಂಗ್ಲಿ ಅವರಿಗೆ ಕನ್ನಡ ಚಿತ್ರರಂಗದಲ್ಲೂ ಬೇಡಿಕೆ ಸೃಷ್ಟಿ ಆಯಿತು. ‘ತ್ರಿಬಲ್​ ರೈಡಿಂಗ್​’, ‘ವೇದ’, ‘ಕಾಟೇರ’ ಮುಂತಾದ ಸಿನಿಮಾಗಳಲ್ಲಿ ಮಂಗ್ಲಿ ಹಾಡಿದ್ದಾರೆ. ‘ಪುಷ್ಪ’ ಚಿತ್ರದ ಕನ್ನಡ ವರ್ಷನ್​ನ ‘ಹು ಅಂತಿಯಾ ಮಾವ… ಊಹೂ ಅಂತೀಯಾ ಮಾಮ’ ಹಾಡಿನ ಮೂಲಕ ಮಂಗ್ಲಿ ಅವರು ಕನ್ನಡಿಗರನ್ನು ರಂಜಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.