
ಕೆಲವು ಕತೆಗಳಿಗೆ ಸಮಯದ ಮಿತಿ ಇರುವುದಿಲ್ಲ. ಅವು ಸಾರ್ವಕಾಲಿಕ ಆಗಿರುತ್ತವೆ. ಅಂಥಹಾ ಕತೆಗಳುಳ್ಳ ಸಿನಿಮಾಗಳೇ ಗೆಲ್ಲುವುದು. 47 ವರ್ಷ ಹಿಂದೆ ಬರೆಯಲಾಗಿದ್ದ ಕತೆಯೊಂದು ಈಗ ಸಿನಿಮಾ ಆಗಿದ್ದು, ಬಿಡುಗಡೆಗೆ ರೆಡಿಯಾಗಿದೆ. 47 ವರ್ಷಗಳ ಹಿಂದೆ ಆ ಸಿನಿಮಾನಲ್ಲಿ ನಟ ಕಮಲ್ ಹಾಸನ್ (Kamal Haasan) ನಟಿಸಬೇಕಿತ್ತು. ಆದರೆ ಕಮಲ್ ಹಾಸನ್ ಅವರು ಆಗ ಬೇರೊಂದು ಕತೆಯನ್ನು ಆಯ್ದುಕೊಂಡರು. ಆದರೆ ಇಷ್ಟು ವರ್ಷ ಆ ಕತೆ ನಿರ್ದೇಶಕನ ಯೋಚನೆಯಲ್ಲಿತ್ತು, ಆದರೆ ಈಗ ಸಿನಿಮಾ ಆಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮುಂದೆ ಬರಲಿದೆ.
ಸಿಂಗೀತಮ್ ಶ್ರೀನಿವಾಸ್, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರು. ಅವರ ಸಿನಿಮಾಗಳು ಟೈಮ್ಲೆಸ್, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಹಲವಾರು ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ಹೆಸರು ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಇದೀಗ ಅವರಿಗೆ 90 ವರ್ಷ ವಯಸ್ಸು. ಆದರೆ ಈ ವಯಸ್ಸಿನಲ್ಲಿ ಮತ್ತೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದು ಮಾತ್ರವಲ್ಲ ಸಿನಿಮಾ ಒಂದನ್ನು ಯಶಸ್ವಿಯಾಗಿ ಮುಗಿಸಿ ಬಿಡುಗಡೆಗೆ ಸಜ್ಜುಗೊಳಿಸಿದ್ದಾರೆ.
ಸಿಂಗೀತ್ ಶ್ರೀನಿವಾಸ್ ಅವರು, ‘ಸಿಂಗ್-ಗೀತಂ’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್ ಭಾಗಿ ಆಗಿದ್ದರು. ಈ ವೇಳೆ 47 ವರ್ಷ ಹಿಂದೆ ಹೇಳಿದ್ದ ಕತೆಯ ಗುಟ್ಟನ್ನು ರಟ್ಟು ಮಾಡಿದರು. ಕಮಲ್ ಹಾಸನ್ ಹೇಳಿರುವಂತೆ, ಯಾವುದೋ ಒಂದು ಅವಾರ್ಡ್ ಕಾರ್ಯಕ್ರಮದ ಬಳಿಕ ಸಿಂಗೀತಂ ಅವರು ಕಮಲ್ ಅವರನ್ನು ಭೇಟಿಯಾಗಿ ಎರಡು ಕತೆಗಳನ್ನು ಹೇಳಿದರಂತೆ. ಅದರಲ್ಲಿ ಒಂದು ‘ಅದ್ವೈತಂ’ ಆ ಕತೆಯೇ ಮುಂದೆ ಕಲ್ಟ್ ಕ್ಲಾಸಿಕ್ ಸಿನಿಮಾ ‘ಪುಷ್ಪಕ ವಿಮಾನ’ ಆಯ್ತು. ಅದೇ ದಿನ ಸಿಂಗೀತಂ ಅವರು ಹೇಳಿದ್ದ ಇನ್ನೊಂದು ಕತೆಯೇ ಈಗ ‘ಸಿಂಗ್ ಗೀತಂ’ ಸಿನಿಮಾ ಆಗಿರುವ ಕತೆ.
ಇದನ್ನೂ ಓದಿ:94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ
47 ವರ್ಷಗಳ ಹಿಂದೆಯೇ ಸಿಂಗೀತಂ ಅವರು ಆ ಕತೆಯನ್ನು ರೆಡಿ ಮಾಡಿಕೊಟ್ಟುಕೊಂಡಿದ್ದರು. ಆ ಸಿನಿಮಾಕ್ಕೆ ಕಮಲ್ ಹಾಸನ್ ಅವರನ್ನು ನಾಯಕನನ್ನಾಗಿ ಹಾಕಿಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ದಶಕಗಳ ಕಾಲ ಆ ಕತೆ ಸಿಂಗೀತಂ ಅವರ ಬಳಿಯೇ ಉಳಿದಿತ್ತು. ಈಗ ಕೊನೆಗೂ ಅದನ್ನು ಸಿನಿಮಾ ಮಾಡಿದ್ದಾರೆ ಹಿರಿಯ ನಿರ್ದೇಶಕ. ಸಿನಿಮಾ ಜೂನ್ 11 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಹಲವು ಹೊಸ ನಟರು ‘ಸಿಂಗ್ ಗೀತಂ’ ಸಿನಿಮಾನಲ್ಲಿ ನಟಿಸಿದ್ದಾರೆ.
‘ಹಾಲು ಜೇನು’, ‘ಎರಡು ನಕ್ಷತ್ರ’, ‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಜ್ವಾಲಾಮುಖಿ’, ಶಿವಣ್ಣ ನಟನೆಯ ಮೊದಲ ಸಿನಿಮಾ ‘ಆನಂದ್’, ‘ಶ್ರುತಿ ಸೇರಿದಾಗ’, ‘ದೇವತಾ ಮನುಷ್ಯ’, ಶಿವಣ್ಣ ನಟನೆಯ ‘ಸಂಯುಕ್ತ’, ‘ಟುವ್ವಿ, ಟುವ್ವಿ, ಟುವ್ವಿ’ ಇನ್ನೂ ಹಲವಾರು ಸಿನಿಮಾಗಳನ್ನು ಅವರು ಕನ್ನಡದಲ್ಲಿ ನಿರ್ದೇಶಿಸಿದ್ದಾರೆ. ತೆಲುಗು ಮತ್ತು ತಮಿಳಿನಲ್ಲೂ ಇಂಥಹಾ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳ ನೀಡಿದ್ದಾರೆ. ಈಗ ಮತ್ತೆ ನಿರ್ದೇಶನ ಮಾಡಿದ್ದು, ಸಿನಿಮಾ ಜೂನ್ 11 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ