
ನಟ ದುಲ್ಕರ್ ಸಲ್ಮಾನ್ (Dulquer Salmaan) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಮೂಲತಃ ಕೇರಳದವರಾದ ಅವರು ಮಲಯಾಳಂ, ತಮಿಳು, ತೆಲುಗು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ನಟಿಸಿರುವ ‘ಸೀತಾ ರಾಮಂ’ (Sita Ramam) ಸಿನಿಮಾ ಬಿಡುಗಡೆ ಸಜ್ಜಾಗಿದೆ. ಆಗಸ್ಟ್ 5ರಂದು ಈ ಚಿತ್ರ ರಿಲೀಸ್ ಆಗಲಿದೆ. ಅನೇಕ ನಗರಗಳಿಗೆ ತೆರಳಿ ದುಲ್ಕರ್ ಸಲ್ಮಾನ್ ಅವರು ಪ್ರಚಾರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಮೃಣಾಲ್ ಠಾಕೂರ್ ಕೂಡ ಪ್ರಚಾರ ಕಾರ್ಯದಲ್ಲಿ ಭಾಗಿ ಆಗುತ್ತಿದ್ದಾರೆ. ಈ ವೇಳೆ ದುಲ್ಕರ್ ಸಲ್ಮಾನ್ ಅವರೊಂದು ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ರೊಮ್ಯಾಂಟಿಕ್ ಸಿನಿಮಾ ಮಾಡುವುದಿಲ್ಲ ಎಂದು ಅವರು ನಿರ್ಧಾರ ಮಾಡಿದ್ದಾರೆ. ಈ ಮಾತು ಕೇಳಿ ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಆದರೆ ಒಂದು ವರ್ಗದ ಪ್ರೇಕ್ಷಕರು ಖುಷಿಪಟ್ಟಿದ್ದಾರೆ.
ದುಲ್ಕರ್ ಸಲ್ಮಾನ್ ಅವರು ಅನೇಕ ಲವ್ ಸ್ಟೋರಿ ಚಿತ್ರಗಳನ್ನು ಮಾಡಿ ಜನಮನ ಗೆದ್ದಿದ್ದಾರೆ. ಅವರನ್ನು ರೊಮ್ಯಾಂಟಿಕ್ ಹೀರೋ ಆಗಿ ಜನರು ಇಷ್ಟಪಟ್ಟಿದ್ದಾರೆ. ಆದರೆ ಮತ್ತೆ ಮತ್ತೆ ಅದೇ ರೀತಿಯ ಪಾತ್ರಗಳನ್ನು ಮಾಡಬಾರದು ಎಂಬುದು ದುಲ್ಕರ್ ಸಲ್ಮಾನ್ ತೀರ್ಮಾನ. ‘ಇನ್ಮುಂದೆ ಯಾವುದೇ ಕಾರಣಕ್ಕೂ ರೊಮ್ಯಾಂಟಿಕ್ ಪ್ರೇಮಕಥೆಯ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಮಾಸ್ ಸಿನಿಮಾಗಳಲ್ಲಿ ದುಲ್ಕರ್ ಸಲ್ಮಾನ್ ನಟಿಸುವುದಿಲ್ಲ ಎಂದು ಕೆಲವು ಅಭಿಮಾನಿಗಳು ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಇನ್ಮುಂದೆ ಪಕ್ಕಾ ಮಾಸ್ ಶೈಲಿಯ ಚಿತ್ರಗಳನ್ನು ಅವರು ಮಾಡಲಿದ್ದಾರೆ. ಆದರೆ ಅವರನ್ನು ಲವರ್ಬಾಯ್, ರೊಮ್ಯಾಂಟಿಕ್ ಹೀರೋ ಆಗಿ ನೋಡಲು ಬಯಸುವ ಅಭಿಮಾನಿಗಳಿಗೆ ಇದರಿಂದ ಬೇಸರ ಆಗಲಿದೆ.
‘ಸೀತಾ ರಾಮಂ’ ಚಿತ್ರದಲ್ಲಿ ಎರಡು ಕಾಲಘಟ್ಟದ ಕಥೆ ಇರಲಿದೆ. ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ನಲ್ಲಿ ಈ ಎಳೆಯನ್ನು ಬಿಟ್ಟುಕೊಡಲಾಗಿದೆ. ಆಫ್ರೀನ್ ಎಂಬ ಮುಸ್ಲಿಂ ಹುಡುಗಿಯ ಪಾತ್ರವನ್ನು ರಶ್ಮಿಕಾ ಮಂದಣ್ಣ ನಿಭಾಯಿಸಿದ್ದಾರೆ. ಸೇನಾಧಿಕಾರಿಯಾಗಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಅವರ ಪ್ರೇಯಸಿಯಾಗಿ ಮೃಣಾಲ್ ಠಾಕೂರ್ ಬಣ್ಣ ಹಚ್ಚಿದ್ದಾರೆ. ಸದ್ಯ ಟ್ರೇಲರ್ ಮೂಲಕ ಗಮನ ಸೆಳೆದಿರುವ ಈ ಚಿತ್ರಕ್ಕೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ಹನು ರಾಘವಪುಡಿ ಅವರ ನಿರ್ದೇಶನದಲ್ಲಿ ‘ಸೀತಾ ರಾಮಂ’ ಮೂಡಿಬಂದಿದೆ.