ದುಲ್ಕರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಹಾಗೂ ಮೃಣಾಲ್ ಠಾಕೂರ್ ಅವರು ಮುಖ್ಯಭೂಮಿಕೆ ನಿಭಾಯಿಸಿರುವ ‘ಸೀತಾ ರಾಮಂ’ (Sita Ramam) ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರ ಖ್ಯಾತಿಯೂ ಹೆಚ್ಚಿದೆ. ಅದರಲ್ಲೂ ಅತಿ ಹೆಚ್ಚು ಗಮನ ಸೆಳೆಯುತ್ತಿರುವುದು ಮೃಣಾಲ್ ಠಾಕೂರ್ (Mrunal Thakur). ಎರಡು ಶೇಡ್ ಇರುವ ಪಾತ್ರವನ್ನು ನಿಭಾಯಿಸಿರುವ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರ ನಟನೆಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೃಣಾಲ್ ಠಾಕೂರ್ ಅವರ ಸಂಭಾವನೆ (Mrunal Thakur Remuneration) ಕೂಡ ಹೆಚ್ಚಾಗಿದೆ. ಬಣ್ಣದ ಲೋಕದಲ್ಲಿ ಅವರಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಪ್ಯಾನ್ ಇಂಡಿಯಾ ನಟಿಯಾಗಿ ಅವರೀಗ ಮಿಂಚುತ್ತಿದ್ದಾರೆ.
ದಕ್ಷಿಣ ಭಾರತಕ್ಕೆ ಕಾಲಿಡುವುದಕ್ಕೂ ಮುನ್ನವೇ ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ಮೃಣಾಲ್ ಠಾಕೂರ್ ಪರಿಚಿತರಾಗಿದ್ದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅವರು ಮನೆ ಮಾತಾಗಿದ್ದರು. 2018ರಲ್ಲಿ ಅವರು ಬಾಲಿವುಡ್ ಕದ ತಟ್ಟಿದರು. ಬಳಿಕ ‘ಸೂಪರ್ 30’, ‘ಜೆರ್ಸಿ’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ಮೂಲಕ ಅವರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿಯಾಗಿ ಬೆಳೆದುನಿಂತರು.
ಮೃಣಾಲ್ ಠಾಕೂರ್ ಅವರ ವೃತ್ತಿಜೀವನಕ್ಕೆ ‘ಸೀತಾ ರಾಮಂ’ ಸಿನಿಮಾ ದೊಡ್ಡ ಮೈಲೇಜ್ ನೀಡಿದೆ. ಈ ಚಿತ್ರ ಆಗಸ್ಟ್ 5ರಂದು ಥಿಯೇಟರ್ನಲ್ಲಿ ಬಿಡುಗಡೆಯಾಗಿ ಉತ್ತಮ ಕಮಾಯಿ ಮಾಡಿತು. ನಂತರ ಒಟಿಟಿಗೂ ಕಾಲಿಟ್ಟು ದಾಖಲೆ ಪ್ರಮಾಣದಲ್ಲಿ ವೀವ್ಸ್ ಪಡೆದುಕೊಂಡಿತು. ಸಿನಿಮಾ ನೋಡಿದ ಎಲ್ಲರೂ ಮೃಣಾಲ್ ಠಾಕೂರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಿಭಾಯಿಸಿರುವ ಪಾತ್ರಕ್ಕಿಂತಲೂ ಮೃಣಾಲ್ ಠಾಕೂರ್ ಮಾಡಿರುವ ಪಾತ್ರವೇ ಸಖತ್ ಹೈಲೈಟ್ ಆಗಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಒಂದು ಮೂಲದ ಪ್ರಕಾರ, ಮೃಣಾಲ್ ಠಾಕೂರ್ ಅವರ ಸಂಭಾವನೆ ಬಾಲಿವುಡ್ನಲ್ಲಿ 2 ಕೋಟಿ ತಲುಪಿದೆ. ದಕ್ಷಿಣದಲ್ಲಿ ಅವರು ಒಂದು ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಅಂಕಿ-ಸಂಖ್ಯೆಗಳ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಮಾತನಾಡಿಲ್ಲ. ಒಟ್ಟಿನಲ್ಲಿ ಅವರ ಡಿಮ್ಯಾಂಡ್ ಹೆಚ್ಚಿರುವುದಂತೂ ನಿಜ.
ತಮಗೆ ಸಿಗುವ ಪಾತ್ರಕ್ಕೆ ಮೃಣಾಲ್ ಠಾಕೂರ್ ಅವರು ನ್ಯಾಯ ಒದಗಿಸುತ್ತಾರೆ. ಗ್ಲಾಮರ್ ಮತ್ತು ನಟನೆ ಎರಡಕ್ಕೂ ಸೈ ಎಂಬಂತಿರುವ ಈ ಪ್ರತಿಭಾಂತ ಕಲಾವಿದೆಯ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಬರುವ ಆಫರ್ಗಳನ್ನು ಅವರು ಅಳೆದು-ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ‘ಸೀತಾ ರಾಮಂ’ ಸಿನಿಮಾದ ಗೆಲುವಿನ ಬಳಿಕ ಅವರಿಗೆ ದಕ್ಷಿಣ ಭಾರತದಿಂದ ಹೆಚ್ಚು ಆಫರ್ಸ್ ಬರುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.