ಸೋನು ಸೂದ್ ಭೇಟಿಯಾಗಲು 700 ಕಿ.ಮೀ. ಪಾದಯಾತ್ರೆ ಮಾಡಿದ ಯುವಕ; ರಿಯಲ್​ ಹೀರೋ ಪ್ರತಿಕ್ರಿಯೆ ಏನು?

ಈ ಅಭಿಮಾನಿಯ ಹೆಸರು ವೆಂಕಟೇಶ್​. ಸೋನು ಸೂದ್​ ಅವರನ್ನು ಭೇಟಿ ಮಾಡಲು ಬರಿಗಾಲಿನಲ್ಲಿ ಹೈದರಾಬಾದ್​ನಿಂದ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಟರ್​ ಪಾದಯಾತ್ರೆ ಮಾಡಿದ್ದಾನೆ.

ಸೋನು ಸೂದ್ ಭೇಟಿಯಾಗಲು 700 ಕಿ.ಮೀ. ಪಾದಯಾತ್ರೆ ಮಾಡಿದ ಯುವಕ; ರಿಯಲ್​ ಹೀರೋ ಪ್ರತಿಕ್ರಿಯೆ ಏನು?
ಸೋನು ಸೂದ್​ ಜೊತೆ ಅಭಿಮಾನಿ ವೆಂಕಟೇಶ್​

Updated on: Jun 11, 2021 | 8:12 AM

ನಟ ಸೋನು ಸೂದ್​ ಅವರು ಲಕ್ಷಾಂತರ ಜನರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಕಳೆದ ವರ್ಷ ಲಾಕ್​ಡೌನ್​ ಆರಂಭ ಆದಾಗಿನಿಂದಲೂ ಅವರು ಹಲವು ಬಗೆಯಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಅವರಿಗೆ ಅಸಂಖ್ಯ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ನೂರಾರು ಬಗೆಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವ ಜನರಿದ್ದಾರೆ. ಇತ್ತೀಚೆಗೆ ವೆಂಕಟೇಶ್​ ಎಂಬ ಯುವಕ ಎಲ್ಲರ ಗಮನ ಸೆಳೆದಿದ್ದಾನೆ. ಸೋನು ಸೂದ್​ ಅವರನ್ನು ಭೇಟಿ ಮಾಡಬೇಕು ಎಂಬ ಕಾರಣಕ್ಕೆ ಆತ ಬರೋಬ್ಬರಿ 700 ಕಿಲೋ ಮೀಟರ್​ ನಡೆದಿದ್ದಾನೆ.

ಈ ಅಭಿಮಾನಿಯ ಹೆಸರು ವೆಂಕಟೇಶ್​. ಹೈದರಾಬಾದ್​ ಮೂಲದ ಈತನಿಗೆ ಸೋನು ಸೂದ್​ ಕಂಡರೆ ಅಪಾರ ಗೌರವ. ಹಾಗಾಗಿ ಅವರನ್ನು ಭೇಟಿ ಮಾಡಲು ಬರಿಗಾಲಿನಲ್ಲಿ ಹೈದರಾಬಾದ್​ನಿಂದ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಟರ್​ ಪಾದಯಾತ್ರೆ ಮಾಡಿದ್ದಾನೆ. ಈತನ ಅಭಿಮಾನ ಕಂಡು ಸೋನು ಸೂದ್​ ಖುಷಿ ಆಗಿದ್ದಾರೆ ಎಂಬುದೇನೋ ನಿಜ. ಆದರೆ ಬೇರೆ ಯಾರೂ ಹೀಗೆ ಮಾಡಬೇಡಿ ಎಂದು ತಮ್ಮ ಅಭಿಮಾನಿ ಬಳಗಕ್ಕೆ ಅವರು ಬುದ್ಧಿಮಾತು ಹೇಳಿದ್ದಾರೆ.

‘ನನ್ನನ್ನು ಭೇಟಿಯಾಗಲು ವೆಂಕಟೇಶ್​ ಹೈದರಾಬಾದ್​ನಿಂದ ಮುಂಬೈವರೆಗೆ ಬರಿಗಾಲಿನಲ್ಲಿ ನಡೆದುಕೊಂಡು ಬಂದಿದ್ದಾನೆ. ಅವನಿಗೆ ವಾಹನದ ವ್ಯವಸ್ಥೆ ಮಾಡಿದರೂ ಕೂಡ ಅವನು ಅದನ್ನು ಒಪ್ಪಲಿಲ್ಲ. ಅವನು ನನಗೆ ಸ್ಫೂರ್ತಿದಾಯಕವಾಗಿದ್ದಾನೆ. ಆದರೆ ಬೇರೆ ಯಾರೂ ಕೂಡ ಈ ರೀತಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಕಷ್ಟವನ್ನು ತೆಗೆದುಕೊಳ್ಳಲು ನಾನು ಪ್ರೇರಣೆ ನೀಡುವುದಿಲ್ಲ’ ಎಂದು ಸೋನು ಸೂದ್​ ಅವರು ಟ್ವೀಟರ್​ ಮೂಲಕ ತಿಳಿಸಿದ್ದಾರೆ.

ಈ ವರ್ಷ ದೇಶಾದ್ಯಂತ ಕೊರೊನಾ ವೈರಸ್​ ಎರಡನೇ ಅಲೆ ಆರಂಭ ಆದಾಗ ಸೋನು ಸೂದ್​ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದರು. ಅವರ ಸೂದ್​ ಚಾರಿಟಿ ಫೌಂಡೇಶನ್​ ಮೂಲಕ ಲಕ್ಷಾಂತರ ಜನರಿಗೆ ಅವರ ನೆರವಾಗಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್​ ವ್ಯವಸ್ಥೆ ಮಾಡಿಸುವುದು, ಆಕ್ಸಿಜನ್​ ಸಿಲಿಂಡರ್​ಗಳನ್ನು ಪೂರೈಸುವುದು, ಹಸಿದವರಿಗೆ ಉಚಿತವಾಗಿ ಊಟ ಒದಗಿಸುವುದು ಸೇರಿದಂತೆ ನೂರಾರು ಕೆಲಸಗಳನ್ನು ಅವರು ಮಾಡಿದ್ದಾರೆ. ಹಾಗಾಗಿ ಅವರನ್ನು ಕಂಡರೆ ಎಲ್ಲರಿಗೂ ಪ್ರೀತಿ.

ಇತ್ತೀಚೆಗೆ ಸೋನು ಸೂದ್​ ಬಗ್ಗೆ ಮಾತನಾಡಿದ್ದ ಹುಮಾ ಖುರೇಶಿ. ‘ಸೋನು ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಬೇಕು. ನಾವೆಲ್ಲ ಅವರಿಗೆ ಖಂಡಿತವಾಗಿ ವೋಟ್​ ಹಾಕುತ್ತೇವೆ’ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸೋನು ಸೂದ್​, ‘ಇದೆಲ್ಲ ಜಾಸ್ತಿ ಆಯಿತು’ ಎಂದಿದ್ದರು.

ಇದನ್ನೂ ಓದಿ:

ಸೋನು ಸೂದ್​ ಒಂದು ಸಿನಿಮಾಗೆ ಪಡೆಯೋ ಸಂಭಾವನೆ ಎಷ್ಟು? ಈ ನಟನಿಗೆ ಎಲ್ಲಿಂದ ಬರುತ್ತೆ ಇಷ್ಟೊಂದು ಹಣ?

ಸೋನು ಸೂದ್​ ದುಡ್ಡಿಗಾಗಿ ಹಪಾಹಪಿಸುವ ವ್ಯಕ್ತಿ ಆಗಿದ್ದರು; ಇನ್ನೊಂದು ಮುಖ ತೆರೆದಿಟ್ಟ ನಿರ್ಮಾಪಕ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us