ನಟ ಸೋನು ಸೂದ್ ಮಾಡುತ್ತಿರುವ ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕಳೆದ ವರ್ಷ ಲಾಕ್ಡೌನ್ ವೇಳೆ ಶುರುವಾದ ಅವರ ಸಮಾಜಸೇವೆ ಇಂದಿಗೂ ಮುಂದುವರಿದಿದೆ. ಲಾಕ್ಡೌನ್ನಿಂದಾಗಿ ತಮ್ಮ ತಮ್ಮ ಊರುಗಳಿಗೆ ಮರಳಲು ಸಾಧ್ಯವಾಗದೇ ಇರುವ ಎಷ್ಟೋ ಜನರಿಗೆ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್ ರಿಯಲ್ ಹೀರೋ ಎನಿಸಿಕೊಂಡಿದ್ದರು. ಕೊರೊನಾ ಹಾವಳಿಯಿಂದ ತತ್ತರಿಸಿರುವ ಅನೇಕರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಐಪಿಎಲ್ ರದ್ದಾದ ಬಳಿಕ ತಮ್ಮ ದೇಶಕ್ಕೆ ಮರಳಲು ಕಷ್ಟಪಡುತ್ತಿರುವ ಆಸ್ಟ್ರೇಲಿಯಾ ಆಟಗಾರರಿಗೂ ಕೂಡ ಸಹಾಯ ಮಾಡಿ ಎಂದು ಈಗ ಸೋನು ಸೂದ್ಗೆ ಬೇಡಿಕೆ ಇಡಲಾಗಿದೆ!
ನೆಟ್ಟಿಗರೊಬ್ಬರು ಸೋನು ಸೂದ್ಗೆ ಈ ಬಗ್ಗೆ ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ‘ಆಸ್ಟ್ರೇಲಿಯಾ ಆಟಗಾರರರನ್ನು ಮನೆಗೆ ಕಳಿಸಲು ಸಹಾಯ ಮಾಡುತ್ತೀರಾ ಸೋನು ಭಾಯ್?’ ಎಂದು ಕೇಳಲಾಗಿದೆ. ಅದರ ಜೊತೆ ಅವರು ಹಂಚಿಕೊಂಡಿರುವ ಕಾರ್ಟೂನ್ ಗಮನ ಸೆಳೆಯುತ್ತಿದೆ. ‘ನಮ್ಮನ್ನು ಮನೆಗೆ ಕಳಿಸಲು ನೀವು ಮಧ್ಯೆ ಪ್ರವೇಶಿಸಬೇಕು’ ಎಂದು ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಸ್ಟೀವ್ ಸ್ಮಿತ್ ಅವರು ಸೋನುಗೆ ಮೆಸೇಜ್ ಮೂಲಕ ವಿನಂತಿ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಕಾರ್ಟೂನ್ ರಚಿಸಲಾಗಿದೆ.
ಈ ಟ್ವೀಟ್ಗೆ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈಗಲೇ ನಿಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿಕೊಳ್ಳಿ’ ಎಂದು ಟ್ವೀಟ್ ಮಾಡುವ ಮೂಲಕ ತಾವು ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಆದರೆ ಇದೆಲ್ಲವೂ ಒಂದು ತಮಾಷೆಯ ಸಂಭಾಷಣೆ. ಆ ಕಾರಣಕ್ಕಾಗಿಯೇ ಅವರು ಈ ಟ್ವೀಟ್ನಲ್ಲಿ ಜೋರಾಗಿ ನಗುವ ಎಮೋಜಿಗಳನ್ನು ಬಳಸಿದ್ದಾರೆ. ಸದ್ಯ ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ.
Pack your bags.
Right away ????? https://t.co/SichuO43Yi— sonu sood (@SonuSood) May 7, 2021
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಿರುವ ಕಾರಣ ಭಾರತದಿಂದ ಆಸ್ಟ್ರೇಲಿಯಾಗೆ ಬರುವವರ ಮೇಲೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಐಪಿಎಲ್ ರದ್ದಾದ ಬಳಿಕ ತಮ್ಮ ತವರಿಗೆ ಮರಳಲು ಆಸ್ಟ್ರೇಲಿಯಾ ಆಟಗಾರರಿಗೆ ಕಷ್ಟ ಆಗುತ್ತಿದೆ. ಸದ್ಯ ಅವರನ್ನು ಬೇರೆ ದೇಶಗಳಿಗೆ ಕಳಿಸಿ, ಅಲ್ಲಿ ನಿಗದಿತ ದಿನಗಳವರೆಗೆ ಕ್ವಾರಂಟೈನ್ನಲ್ಲಿ ಇರಿಸಿದ ನಂತರ ಆಸ್ಟ್ರೇಲಿಯಾಗೆ ಕಳಿಸುವ ಬಗ್ಗೆ ಪ್ರಯತ್ನಗಳು ಜಾರಿಯಲ್ಲಿವೆ.
ಇದನ್ನೂ ಓದಿ:
ಸೋನು ಸೂದ್ಗೆ ಫ್ರಾಡ್ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್ ಹೀರೋ?
ವಿವರ ಕಳುಹಿಸು ಸಹೋದರ.. 10 ನಿಮಿಷದಲ್ಲಿ ಸಿಲಿಂಡರ್ ತಲುಪಿಸುತ್ತೇನೆ! ಸುರೇಶ ರೈನಾ ಕಷ್ಟಕ್ಕೆ ನೆರವಾದ ಸೋನು ಸೂದ್