‘ಹನುಮಾನ್ ಅಂಶ್’ ಬಳಿಕ ಬಿಡುಗಡೆಗೆ ಸಜ್ಜಾದ ಕನ್ನಡದ ‘ಪ್ರೇಮರೂಪ ಸಾಯಿಪಾದಾನಂದ’ ಸಿನಿಮಾ
ಸಾಯಿಬಾಬಾ ಅನುಯಾಯಿ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ಚರಿತ್ರೆ ಆಧರಿಸಿದ 'ಪ್ರೇಮರೂಪ ಸಾಯಿಪಾದಾನಂದ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಮುಖ್ಯಾಂಶಗಳು
- ಸಾಯಿಬಾಬಾ ಭಕ್ತರಿಗಾಗಿ ಬರಲಿದೆ 'ಪ್ರೇಮರೂಪ ಸಾಯಿಪಾದಾನಂದ' ಸಿನಿಮಾ
- ರಾಧಾಕೃಷ್ಣ ಸ್ವಾಮೀಜಿ ಜೀವನ ಚರಿತ್ರೆ ಆಧರಿಸಿದ ಬಹುಭಾಷಾ ಚಿತ್ರ
- ಸುದ್ದಿಗೋಷ್ಠಿಯಲ್ಲಿ ಭಾವುಕರಾದ ನಿರ್ಮಾಪಕ
ಹಿಂದಿಯ ‘ಹನುಮಾನ್ ಅಂಶ್’ ಸಿನಿಮಾ ಸೂಪರ್ ಹಿಟ್ ಆಗಿದೆ. ‘ಹನುಮಾನ್ ಅಂಶ್’ ಚಿತ್ರದ ಮಾದರಿಯಲ್ಲೇ ಈಗ ಕನ್ನಡ ಚಿತ್ರರಂಗದಲ್ಲಿ ಭಕ್ತಿ ಪ್ರಧಾನ ಹಾಗೂ ಸ್ಪೂರ್ತಿದಾಯಕ ಕಥೆಯುಳ್ಳ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಾಯಿಬಾಬಾ ಅವರ ದಿವ್ಯ ಜೀವನ ಮತ್ತು ಸಂದೇಶಗಳನ್ನು ಸಾರುವ ‘ಪ್ರೇಮರೂಪ ಸಾಯಿಪಾದಾನಂದ’ ಎಂಬ ಹೊಸ ಬಹುಭಾಷಾ ಸಿನಿಮಾ ಈಗ ಬಿಡುಗಡೆಗೆ ಸಂಪೂರ್ಣವಾಗಿ ಸಿದ್ಧಗೊಂಡಿದೆ.
ಸಾಯಿಬಾಬಾ ಅವರ ಪರಮಾನುಯಾಯಿ ಹಾಗೂ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದ ಪ್ರಸಿದ್ಧ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನ ಚರಿತ್ರೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಸ್ವಾಮೀಜಿ ಅವರ ಪ್ರಮುಖ ಶಿಷ್ಯರಾದ ಟಿ. ಕೃಷ್ಣಕುಮಾರ್ ಅವರು ಖ್ಯಾತ ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲ್ಮ್ಸ್ ಸಹಯೋಗದೊಂದಿಗೆ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಬಿ. ನಿತ್ಯಾನಂದ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಆನಂದ್ ಮೌಳಿ ಅವರು ರಾಧಾಕೃಷ್ಣ ಸ್ವಾಮೀಜಿ ಅವರ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಭಿಷೇಕ್ ರಾಜು ಅವರ ಮಧುರ ಸಂಗೀತವಿರುವ ಈ ಸಿನಿಮಾದ ಚಿತ್ರೀಕರಣವು ಬೆಂಗಳೂರು ಹಾಗೂ ತಮಿಳುನಾಡಿನ ಸುಂದರ ತಾಣಗಳು ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಮಾಡಲಾಗಿದೆ.
ಇತ್ತೀಚೆಗೆ ನಡೆದ ಸಿನಿಮಾದ ವಿಶೇಷ ಸುದ್ದಿಗೋಷ್ಠಿ ಹಾಗೂ ಪ್ರದರ್ಶನದಲ್ಲಿ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸಾಯಿಬಾಬಾ ತತ್ವಗಳನ್ನು ಪಸರಿಸಿದ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ: ‘ಕಾಂತಾರ’ ರೆಕಾರ್ಡ್ ಮುರಿದ ‘ಹನುಮಾನ್ ಅಂಶ್’: 9ನೇ ವಾರದಲ್ಲಿ ಹೊಸ ದಾಖಲೆ
ಈ ಸಮಾರಂಭದಲ್ಲಿ ಸ್ವಾಮೀಜಿ ಅವರೊಂದಿಗೆ ತಮಗಿದ್ದ ಹಳೆಯ ಒಡನಾಟವನ್ನು ನೆನಪಿಸಿಕೊಂಡು ನಿರ್ಮಾಪಕ ಟಿ. ಕೃಷ್ಣಕುಮಾರ್ ಭಾವುಕರಾದರು. ಸಾಯಿ ಆಧ್ಯಾತ್ಮಿಕ ಕೇಂದ್ರದ ಚೇರ್ಮನ್ ಶ್ರೀ ಶ್ರೀಚಂದ್ ರಾಜ್ ಪಾಲ್ ಹಾಗೂ ಕನ್ನಡ ಸಾಯಿ ಸಚ್ಚರಿತೆಯ ಬರಹಗಾರರಾದ ಶ್ರೀ ಅನಂತ ರಾಮು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ತಮಿಳು, ಕನ್ನಡ ಹಾಗೂ ಹಿಂದಿ ಭಷೆಗಳಲ್ಲಿ ತಯಾರಾಗಿರುವ ಈ ಚಿತ್ರವು ಶೀಘ್ರದಲ್ಲೇ ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:16 pm, Mon, 19 October 26




