ಹಿಟ್​ ಮೇಲೆ ಹಿಟ್, ಸಂಭಾವನೆ ಏರಿಸಿಕೊಂಡ ನಟಿ ಶ್ರೀಲೀಲಾ?

Sreeleela: ಕನ್ನಡದ ನಟಿ ಶ್ರೀಲೀಲಾ ಪ್ರಸ್ತುತ ತೆಲುಗು ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿ. ಬೇಡಿಕೆ ಹೆಚ್ಚಾದಂತೆ ಸಹಜವಾಗಿಯೇ ನಟಿ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ಸಿನಿಮಾಕ್ಕೆ ಶ್ರೀಲೀಲಾ ಪಡೆಯುತ್ತಿರುವ ಸಂಭಾವನೆ ಎಷ್ಟು?

ಹಿಟ್​ ಮೇಲೆ ಹಿಟ್, ಸಂಭಾವನೆ ಏರಿಸಿಕೊಂಡ ನಟಿ ಶ್ರೀಲೀಲಾ?

Updated on: Nov 02, 2023 | 9:26 PM

ಕನ್ನಡದ ನಟಿ ಶ್ರೀಲೀಲಾ (Sreeleela) ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ದೊಡ್ಡ ದೊಡ್ಡ ಸಿನಿಮಾ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಸಿಕ್ಕ ಪ್ರತಿ ಸಿನಿಮಾ ಅವಕಾಶದಲ್ಲಿಯೂ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸುತ್ತಾ ತೆಲುಗು ಪ್ರೇಕ್ಷಕರ ಮೆಚ್ಚಿನ ನಟಿಯಾಗಿಬಿಟ್ಟಿದ್ದಾರೆ. ಸಿನಿಮಾ ಅವಕಾಶಗಳು ಹೆಚ್ಚಾಗುತ್ತಿದ್ದಂತೆ ನಟಿ ಶ್ರೀಲೀಲಾ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎಂಬ ಮಾತುಗಳು ಟಾಲಿವುಡ್​ನಲ್ಲಿ ಆರಂಭವಾಗಿದೆ.

ಶ್ರೀಲೀಲಾ ತಮ್ಮ ಸಂಭಾವನೆಯನ್ನು ಮೂರು ಕೋಟಿಗೆ ಏರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ವೃತ್ತಿ ಆರಂಭಿಸಿದಾಗ ಕನ್ನಡದ ಸಿನಿಮಾಗಳಲ್ಲಿ ಲಕ್ಷಗಳಲ್ಲಿ ಸಂಭಾವನೆ ಪಡೆಯುತ್ತಿದ್ದ ಶ್ರೀಲೀಲಾ, ತೆಲುಗಿಗೆ ಎಂಟ್ರಿ ಆದಾಗಲೂ ಲಕ್ಷಗಳಲ್ಲಿಯೇ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಇತ್ತೀಚೆಗೆ ಶ್ರೀಲೀಲಾಗೆ ಬೇಡಿಕೆ ಹೆಚ್ಚಾಗಿದ್ದು, ಸಹಜವಾಗಿಯೇ ಬೇಡಿಕೆ ಹೆಚ್ಚಾದಂತೆ ಸಂಭಾವನೆಯನ್ನೂ ಹೆಚ್ಚು ಮಾಡಿಕೊಂಡಿದ್ದಾರೆ. ಶ್ರೀಲೀಲಾ ಈಗ ಪ್ರತಿ ಸಿನಿಮಾಕ್ಕೆ ಎರಡು ಅಥವಾ ಮೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಶ್ರೀಲೀಲಾ, ನಂದಮೂರಿ ಬಾಲಕೃಷ್ಣ ಜೊತೆಗೆ ನಟಿಸಿದ್ದ ‘ಭಗವಂತ್ ಕೇಸರಿ’ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಇದ್ದರೂ ಸಹ ಸಿನಿಮಾ ನೋಡಿದ ಹಲವರು ಶ್ರೀಲೀಲಾರ ನಟನೆ, ನೃತ್ಯವನ್ನು ಬಹುವಾಗಿ ಕೊಂಡಾಡಿದ್ದಾರೆ. ಅದೊಂದು ಸಿನಿಮಾ ಮಾತ್ರವೇ ಅಲ್ಲದೆ ಅದರ ಹಿಂದಿನ ಕೆಲವು ಸಿನಿಮಾಗಳಲ್ಲಿಯೂ ಶ್ರೀಲೀಲಾರ ಅಂದ, ನಟನೆ ವಿಶೇಷವಾಗಿ ನೃತ್ಯವನ್ನು ತೆಲುಗು ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದರು.

ಇದನ್ನೂ ಓದಿ:ವಿಜಯ್ ದೇವರಕೊಂಡ ಸಿನಿಮಾದಿಂದ ಹೊರನಡೆದ ಶ್ರೀಲೀಲಾ: ಬದಲಿ ನಟಿ ರಶ್ಮಿಕಾ?

ಶ್ರೀಲೀಲಾ ಪ್ರಸ್ತುತ ತೆಲುಗಿನ ಅತ್ಯಂತ ಬ್ಯುಸಿ ಯುವನಟಿ. ಶ್ರೀಲೀಲಾ ನಟಿಸಿರುವ ‘ಸ್ಕಂದ’ ತೆಲುಗು ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಮಾಡಿತ್ತು. ಅದರ ಬೆನ್ನಲ್ಲೆ ‘ಭಗವಂತ್ ಕೇಸರಿ’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಇದೀಗ ಶ್ರೀಲೀಲಾ ಐದು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿಯೂ ಶ್ರೀಲೀಲಾ ನಾಯಕಿ. ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಹಾಗೂ ‘ಆದಿಕೇಶವ’ ಹೆಸರಿನ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆದರೆ ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದಾಗಿ ಆ ಸಿನಿಮಾವನ್ನು ಶ್ರೀಲೀಲಾ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಶ್ರೀಲೀಲಾಗೆ ತಮಿಳು ಸಿನಿಮಾಗಳ ಆಫರ್​ಗಳು ಸಹ ಬರುತ್ತಿದ್ದು, ಒಂದು ತಮಿಳು ಸಿನಿಮಾವನ್ನು ಶ್ರೀಲೀಲಾ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ ಆದರೆ ಅದು ಯಾವ ಸಿನಿಮಾ ಎಂದು ಇನ್ನೂ ಬಹಿರಂಗಗೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ