ಸಿನಿಮಾ ರಂಗದಿಂದ ದೂರಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?

Sreeleela movie: ಶ್ರೀಲೀಲಾ, ಕನ್ನಡದ ನಟಿ. ಈಗ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಸಖತ್ ಮಿಂಚುತ್ತಿದ್ದಾರೆ. ಹಿಂದಿ, ತಮಿಳು, ತೆಲುಗಿನ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಸಿನಿಮಾ ರಂಗದಲ್ಲಿ ಸಾಕಷ್ಟು ಯಶಸ್ಸನ್ನೂ ಸಹ ಶ್ರೀಲೀಲಾ ಗಳಿಸಿದ್ದಾರೆ. ಆದರೆ ಒಮ್ಮೆ ಸಿನಿಮಾ ರಂಗವನ್ನೇ ಬಿಟ್ಟು ಬಿಡುವ ಮನಸ್ಸು ಮಾಡಿದ್ದರಂತೆ ಶ್ರೀಲೀಲಾ. ಕಾರಣವೇನು?

ಸಿನಿಮಾ ರಂಗದಿಂದ ದೂರಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?
Sreeleela

Updated on: Mar 21, 2026 | 8:53 PM

ಶ್ರೀಲೀಲಾ (Sreeleela), ಕನ್ನಡದ ನಟಿ. ಈಗ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಸಖತ್ ಮಿಂಚುತ್ತಿದ್ದಾರೆ. ತೆಲುಗಿನಲ್ಲಂತೂ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ತಮಿಳಿನಲ್ಲೂ ಸಹ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಆಗಲೇ ಮೂರು ಸಿನಿಮಾಕ್ಕೆ ಎಸ್ ಹೇಳಿದ್ದು, ಒಂದು ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಸ್ಟಾರ್ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ಇಷ್ಟು ಯಶಸ್ವಿ ನಟಿ ಆಗಿರುವ ಶ್ರೀಲೀಲಾ, ಕೆಲ ವರ್ಷಗಳ ಹಿಂದೆ ನಟನೆಯನ್ನು ತ್ಯಜಿಸಿ, ಚಿತ್ರರಂಗದಿಂದಲೇ ದೂರಾಗುವ ನಿರ್ಧಾರ ಮಾಡಿದ್ದರಂತೆ.

ಶ್ರೀಲೀಲಾ, ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದರು. ತೆಲುಗಿನ ಖ್ಯಾತ ನಿರೂಪಕಿ ಸುಮಾ ಕನಕಾಲ ಅವರೊಟ್ಟಿಗೆ ತಮಾಷೆಯ ಸಂದರ್ಶನದಲ್ಲಿ ಶ್ರೀಲೀಲಾ ಭಾಗಿ ಆಗಿದ್ದರು. ಅದೇ ಸಂದರ್ಶನದಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಮತ್ತೊಬ್ಬ ನಾಯಕ ನಟಿ ರಾಶಿ ಖನ್ನಾ ಸಹ ಭಾಗಿ ಆಗಿದ್ದರು.

ಕಾರ್ಯಕ್ರಮದಲ್ಲಿ ಟ್ರೋಲ್​​ಗಳ ಬಗ್ಗೆ ನಿರೂಪಕಿ ಸುಮಾ ಕನಕಾಲ ಅವರು ಶ್ರೀಲೀಲಾಗೆ ಪ್ರಶ್ನೆ ಕೇಳಿದರು. ಅದಕ್ಕೆ ಶ್ರೀಲೀಲಾ, ‘”ನಾನು ಸಿನಿಮಾಗಳಲ್ಲಿ ನಟಿಸುವುದನ್ನು ಆರಂಭಿಸಿದ್ದಾಗ ಟ್ರೋಲ್​​ಗಳ ಬಗ್ಗೆ ಬಹಳ ಭಯ ಆಗುತ್ತಿತ್ತು, ಟ್ರೋಲ್​​ಗಳು ಬಹಳ ಕೆಟ್ಟದು ಅನಿಸುತ್ತಿದ್ದವು. ಹಲವು ಬಾರಿ ಅತ್ತಿದ್ದು ಸಹ ಇದೆ. ಟ್ರೋಲ್​​ಗಳು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತಿದ್ದವು. ಎಷ್ಟರ ಮಟ್ಟಿಗೆಂದರೆ ನಾನು ಚಿತ್ರರಂಗವನ್ನೇ ಬಿಟ್ಟುಬಿಡಲು ತೀರ್ಮಾನಿಸಿದ್ದೆ. ‘ನನಗೆ ನಟಿಸಲು ಸಾಧ್ಯವಾಗುತ್ತದೆ ಎಂದು ಅನಿಸುತ್ತಿಲ್ಲ ಎಂದು ನಾನು ನನ್ನ ತಾಯಿಗೆ ಹೇಳಿದೆ. ನಾನು ಶಾಲೆ ಅಥವಾ ಕಾಲೇಜಿಗೆ ಹಿಂತಿರುಗಿಬಿಡುತ್ತೇನೆ’ ಎಂದಿದ್ದೆ. ನಾನು ತುಂಬಾ ಸೂಕ್ಷ್ಮವಾಗಿದ್ದೆ, ಆದರೆ ಈಗ ಹಾಗಿಲ್ಲ, ಟ್ರೋಲ್​​ಗಳು, ಅವರ ನಿಂದನೆ, ವ್ಯಂಗ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ನಟಿ ರಾಶಿ ಖನ್ನಾ ಜೊತೆಗೆ ಶ್ರೀಲೀಲಾ ಸಖತ್ ಮಸ್ತಿ: ವಿಡಿಯೋ ನೋಡಿ

ಅದೇ ಸಂದರ್ಶನದಲ್ಲಿ ಮುಂದುವರೆದು ಮಾತನಾಡಿ, ‘ಇತ್ತೀಚೆಗೆ ಜನ ತುಸು ಬುದ್ಧಿವಂತರು ಸಂವೇದಶೀಲರು ಆಗಿದ್ದಾರೆ ಅನಿಸುತ್ತದೆ. ಮೊದಲು ಬಹಳ ಒರಟಾಗಿ ಕಮೆಂಟ್ ಮಾಡುತ್ತಿದ್ದರು. ಆದರೆ ಈಗ ನೆಗೆಟಿವಿ ಇದೆಯೆಂದರೆ ತುಸು ಯೋಚಿಸುತ್ತಾರೆ, ಸರಿಯಾ? ತಪ್ಪಾ? ಎಂದು ಅವಲೋಕಿಸುತ್ತಾರೆ’ ಎಂದಿದ್ದಾರೆ ಶ್ರೀಲೀಲಾ. ಅದೇ ಸಂದರ್ಶನದಲ್ಲಿ ಇದ್ದ ರಾಶಿ ಖನ್ನಾ, ಟ್ರೋಲ್​​ಗಳ ಬಗ್ಗೆ ಮಾತನಾಡಿ, ‘ನನಗೆ ಟ್ರೋಲ್​​ಗಳು ಮಾನಸಿಕವಾಗಿ ಹಿಂಸೆ ನೀಡುತ್ತವೆ. ಏಕೆಂದರೆ ನಿಜ ಗೊತ್ತಿಲ್ಲದೇ ಅವರು ನಿರ್ಧಾರಗಳನ್ನು ಪ್ರಕಟಿಸುತ್ತಾರೆ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ನನಗೆ ಅದರ ಬಗ್ಗೆ ಈಗಲೂ ಬೇಸರ ಇದೆ’ ಎಂದಿದ್ದಾರೆ.

ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ‘ಆಶಿಖಿ 3’ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇನ್ನೂ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ನಟ ಧನುಶ್ ಜೊತೆಗೆ ಒಂದು ಹಾಗೂ ಶಿವಕಾರ್ತಿಕೇಯನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಇನ್ನು ತೆಲುಗಿನಲ್ಲಿ ರವಿತೇಜ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಮತ್ತೊಂದು ಹೊಸ ಸಿನಿಮಾವನ್ನು ಸಹ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:50 pm, Sat, 21 March 26

Follow Us