
ಶ್ರೀಲೀಲಾ (Sreeleela), ಕನ್ನಡದ ನಟಿ ಆದರೆ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾಗಳ ಮೂಲಕ ನಟನೆ ಆರಂಭಿಸಿದ ಶ್ರೀಲೀಲಾ, ಬಳಿಕ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಟಾಪ್ ನಟಿಯಾಗಿ ಮೆರೆದರು. ಇದೀಗ ತಮಿಳು ಮತ್ತು ಬಾಲಿವುಡ್ಗೆ ಸಹ ಕಾಲಿಟ್ಟಿದ್ದು, ಬಾಲಿವುಡ್ನಲ್ಲಂತೂ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಸಾಲು-ಸಾಲು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದ್ಭುತ ನಟಿ, ನೃತ್ಯಗಾರ್ತಿ ಆಗಿರುವ ಶ್ರೀಲೀಲಾ, ಮಾನವೀಯ ಹೃದಯವುಳ್ಳ ವ್ಯಕ್ತಿ ಸಹ. ಅದಕ್ಕೆ ಸಾಕ್ಷಿ, ಅವರು ದತ್ತು ಪಡೆದಿರುವ ಮೂವರು ಮಕ್ಕಳು.
ಶ್ರೀಲೀಲಾ ಕೆಲ ವರ್ಷಗಳ ಹಿಂದೆ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಕೆಲ ತಿಂಗಳ ಹಿಂದೆ ಮತ್ತೊಬ್ಬ ಬಾಲಕಿಯನ್ನು ಸಹ ದತ್ತು ಪಡೆದರು. ಈ ಬಗ್ಗೆ ಹೆಚ್ಚಾಗಿ ಶ್ರೀಲೀಲಾ ಮಾತನಾಡಿಲ್ಲ. ಆದರೆ ಅವರ ನಟನೆಯ ತಮಿಳು ಸಿನಿಮಾ ‘ಪರಾಶಕ್ತಿ’ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರಕ್ಕಾಗಿ ನೀಡಿರುವ ಸಂದರ್ಶನವೊಂದರಲ್ಲಿ ತಾವು ಮಕ್ಕಳನ್ನು ದತ್ತು ಪಡೆದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಶ್ರೀಲೀಲಾ ಹೇಳಿರುವಂತೆ ಅವರು ಮಕ್ಕಳನ್ನು ದತ್ತು ಪಡೆಯಲು ಒಂದು ಕನ್ನಡ ಸಿನಿಮಾ ಕಾರಣ. ‘ಆ ವಿಷಯ ಮಾತನಾಡಲು ಹೋದರೆ ನಾನು ಭಾವುಕಳಾಗಿಬಿಡುತ್ತೇನೆ. ನಾನು ಒಂದು ಸಿನಿಮಾ ಮಾಡಿದ್ದೆ. ನಾನು ಕನ್ನಡದ ಒಂದು ಸಿನಿಮಾ ಮಾಡಿದ್ದೆ. ಅದರ ನಿರ್ದೇಶಕರು ನನ್ನನ್ನು ಅನಾಥಾಶ್ರಮವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಾನು ಮಕ್ಕಳೊಟ್ಟಿಗೆ ಬೆರೆತೆ, ಆಗಾಗ್ಗೆ ಫೋನ್ ಮೂಲಕ ಮಾತನಾಡುತ್ತಿದ್ದೆ. ಆ ನಂತರವೂ ನಾನು ಸಹ ಆಗಾಗ್ಗೆ ಅಲ್ಲಿಗೆ ಭೇಟಿ ನೀಡಿ ಅವರೊಟ್ಟಿಗೆ ಸಮಯ ಕಳೆಯುತ್ತಿದ್ದೆ’ ಎಂದಿದ್ದಾರೆ ನಟಿ.
ಇದನ್ನೂ ಓದಿ:ಮೊದಲ ತಮಿಳು ಸಿನಿಮಾ ಬಗ್ಗೆ ಶ್ರೀಲೀಲಾಗೆ ಭಾರಿ ನಿರೀಕ್ಷೆ
‘ಆಗಲೇ ನಾನು ಇಬ್ಬರು ಮಕ್ಕಳನ್ನು ದತ್ತು ಪಡೆದೆ. ಆದರೆ ಅದು ಗೌಪ್ಯವಾಗಿಯೇ ಇತ್ತು. ಬಳಿಕ ಆ ಸಂಸ್ಥೆಯವರು ಆ ಬಗ್ಗೆ ಬಹಿರಂಗಪಡಿಸಿದರು. ಅದರಿಂದ ಇನ್ನಷ್ಟು ಜನರಿಗೆ ದತ್ತು ಪಡೆಯಲು ಸ್ಪೂರ್ತಿ ಸಿಗುತ್ತದೆ ಎಂದು ಅವರು ಹೇಳಿದರು. ಅದರಂತೆ ನಾನೂ ಸಹ ಆ ಬಗ್ಗೆ ಮಾತನಾಡಿದೆ. ಬಳಿಕ 2025 ರ ಏಪ್ರಿಲ್ನಲ್ಲಿ ಅದೇ ಸಂಸ್ಥೆಯವರು ಕೇಳಿದರೆಂದು ಇನ್ನೊಂದು ಹೆಣ್ಣು ಮಗುವನ್ನು ದತ್ತು ಪಡೆದೆ’ ಎಂದಿದ್ದಾರೆ ನಟಿ.
ಶ್ರೀಲೀಲಾ ಅವರು ಗುರು, ಶೋಭಿತಾ ಎಂಬ ಮಕ್ಕಳನ್ನು 2022 ರಲ್ಲಿ ದತ್ತು ಪಡೆದರು. ಬಳಿಕ ಏಪ್ರಿಲ್ ತಿಂಗಳಲ್ಲಿ ಪುಟ್ಟ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಶೋಭಿತಾ ಮತ್ತು ಗುರು ಅಂಗವಿಕಲ ಮಕ್ಕಳಾಗಿದ್ದಾರೆ. ಈ ಮೂವರು ಮಕ್ಕಳು ಶ್ರೀಲೀಲಾ ಜೊತೆಗೆ ಇರುವುದಿಲ್ಲ ಆದರೆ ಅವರ ವಿದ್ಯಾಭ್ಯಾಸ, ಊಟ-ವಸತಿ-ಉಡುಗೆಯ ಖರ್ಚುಗಳನ್ನು ಶ್ರೀಲೀಲಾ ನೋಡಿಕೊಳ್ಳುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ