ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಶ್ರೀಶಾಂತ್ ಅವರು (Sreesanth) ಕಂಬ್ಯಾಕ್ ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯೋಕೆ ಅವರು ಪರದಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಇವುಗಳ ಮಧ್ಯೆ ಶ್ರೀಶಾಂತ್ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ಹಿಂದಿಯಲ್ಲಿ ನಟಿಸಿರುವ ಶ್ರೀಶಾಂತ್ ಈಗ ತಮಿಳಿಗೆ ಕಾಲಿಡೋಕೆ ರೆಡಿ ಆಗಿದ್ದಾರೆ. ಖ್ಯಾತ ನಟಿಯರಾದ ಸಮಂತಾ ಹಾಗೂ ನಯನತಾರಾ ಜತೆಗೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶ್ರೀಶಾಂತ್ ಅವರು ಇನ್ನುಮುಂದೆ ಸಂಪೂರ್ಣವಾಗಿ ಚಿತ್ರರಂಗದಲ್ಲೇ ತೊಡಗಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.
‘ಕಾದು ವಾಕುಲ ರೆಂಡು ಕಾಧಲ್’ ಚಿತ್ರದಲ್ಲಿ ಸಮಂತಾ ನಟಿಸಿದ್ದಾರೆ. ಕಳೆದ ತಿಂಗಳು ಈ ಚಿತ್ರದಲ್ಲಿನ ಸಮಂತಾ ಪಾತ್ರದ ಫಸ್ಟ್ಲುಕ್ ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ನಯನತಾರ ಮತ್ತು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಅವರ ಪ್ರಿಯಕರ ವಿಘ್ನೇಶ್ ಶಿವನ್ ಅವರು ‘ಕಾದು ವಾಕುಲ ರೆಂಡು ಕಾಧಲ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಸೆಟ್ಗೆ ಶ್ರೀಶಾಂತ್ ಕೂಡ ಸೇರ್ಪಡೆ ಆಗಿದ್ದಾರೆ.
ಶ್ರೀಶಾಂತ್ ಪಾತ್ರ ಏನು ಎಂಬ ಕುತೂಹಲ ಮೂಡದೇ ಇರದು. ಇದಕ್ಕೆ ಅವರೇ ಉತ್ತರ ನೀಡಿದ್ದಾರೆ. ‘ಇಂಥ ಉತ್ತಮ ತಂಡದೊಂದಿಗೆ ನಾನು ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಖುಷಿ ನೀಡಿದೆ. ಇದು ಸಿನಿಮಾದಲ್ಲಿ ಬರುವ ಅತ್ಯಂತ ಪ್ರಮುಖ ಪಾತ್ರ. ನಾನು ಈ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಸಿನಿಮಾ ತೆರೆಕಂಡ ನಂತರದಲ್ಲಿ ಆ ಬಗ್ಗೆ ನಿಮಗೆ ತಿಳಿಯಲಿದೆ’ ಎಂದು ಶ್ರೀಶಾಂತ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಸಾಕಷ್ಟು ಖುಷಿಪಟ್ಟಿದ್ದಾರೆ.
2017ರಲ್ಲಿ ತೆರೆಗೆ ಬಂದ ‘ಅಕ್ಸರ್ 2’ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಶ್ರೀಶಾಂತ್ ಕಾಲಿಟ್ಟರು. ಇದಾದ ನಂತರ ಅವರು ಮಲಯಾಳಂ ಚಿತ್ರರಂಗದಲ್ಲೂ ನಟಿಸಿದರು. ಕನ್ನಡದಲ್ಲಿ ತೆರೆಗೆ ಬಂದ ‘ಕೆಂಪೆಗೌಡ 2’ ಚಿತ್ರದಲ್ಲಿ ದೇಶ್ಮುಖ್ ಹೆಸರಿನ ವಿಲನ್ ರೋಲ್ನಲ್ಲಿ ಕಾಣಿಸಿಕೊಂಡರು. ಈ ಚಿತ್ರಕ್ಕೆ 17ನೇ ಸಾಲಿನ ಸಂತೋಷಮ್ ಫಿಲ್ಮ್ ಅವಾರ್ಡ್ಸ್ನಲ್ಲಿ ‘ಬೆಸ್ಟ್ ವಿಲನ್’ ಪ್ರಶಸ್ತಿ ದೊರಕಿದೆ.
ಇದನ್ನೂ ಓದಿ: ‘ಕುಟುಂಬಕ್ಕೆ ಮುಜುಗರ ತರುವ ಪಾತ್ರ ಮಾಡಲ್ಲ’; ಸಮಂತಾ ವಿಚ್ಛೇದನಕ್ಕೆ ಪರೋಕ್ಷವಾಗಿ ಕಾರಣ ನೀಡಿದ ನಾಗ ಚೈತನ್ಯ