
200 ಕೋಟಿ ಸುಲಿಗೆ ಪ್ರಕರಣ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ರ (Jacqueline Fernandez) ಮಾಜಿ ಬಾಯ್ಫ್ರೆಂಡ್ ಸುಕೇಶ್ ಚಂದ್ರಶೇಖರ್ (Sukesh chandrasekhar) ದೆಹಲಿ ಜೈಲಿನಲ್ಲಿದ್ದು, ಕೆಲವು ದಿನಗಳ ಹಿಂದಷ್ಟೆ ಆತನ ಜೈಲು ಕೋಣೆ ಮೇಲೆ ಕಾರಾಗೃಹ ಅಧಿಕಾರಿಗಳು ದಾಳಿ ನಡೆಸಿ ಹಲವು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದು ವರದಿಯಾಗಿತ್ತು. ಇದೀಗ ದೆಹಲಿಯ ಪಟಿಯಾಲಾ ಕೋರ್ಟ್ಗೆ ಸುಕೇಶ್ ಅನ್ನು ಹಾಜರು ಪಡಿಸಲಾಗಿದ್ದು ಆ ವೇಳೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಪ್ರಕರಣದ ಬಗ್ಗೆ ಸುಕೇಶ್ ಹೇಳಿಕೆ ನೀಡಿದ್ದಾನೆ.
ದೆಹಲಿ ಪಟಿಯಾಲಾ ಹೌಸ್ನಲ್ಲಿ ಹೇಳಿಕೆ ದಾಖಲಿಸಿರುವ ಸುಕೇಶ್ ಚಂದ್ರಶೇಖರ್ 200 ಕೋಟಿ ವಂಚನೆ ಪ್ರಕರಣಕ್ಕೂ ಜಾಕ್ವೆಲಿನ್ ಫರ್ನಾಂಡೀಸ್ಗೂ ಯಾವುದೇ ಸಂಬಂಧವಿಲ್ಲ. ಆಕೆ ಚಿಂತಿಸುವ ಅಗತ್ಯವಿಲ್ಲ. ಆಕೆಯನ್ನು ರಕ್ಷಿಸಲು ನಾನಿದ್ದೇನೆ ಎಂದಿದ್ದಾನೆ. ಕೆಲವು ದಿನಗಳ ಹಿಂದೆ ದೆಹಲಿಯ ಆರ್ಥಿಕ ಅಪರಾಧ ತನಿಖಾ ವಿಭಾಗದ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಜಾಕ್ವೆಲಿನ್ ಕುರಿತಾಗಿ ಸುದ್ದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಜಾಕ್ವೆಲಿನ್ಗೆ ಪ್ರೇಮಿಗಳ ದಿನಾಚಾರಣೆಯಗಳನ್ನು ಕೋರಿದ್ದ ಸುಕೇಶ್.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ದೆಹಲಿಯ ಪಟಿಯಾಲಾ ಕೋರ್ಟ್ಗೆ ಹಾಜರಾಗಿದ್ದ ನಟಿ ಜಾಕ್ವೆಲಿನ್, ತಾನು ಸನ್ ಟಿವಿಯ ಮಾಲೀಕನೆಂದು, ಮಾಜಿ ಸಿಎಂ, ದಿವಂಗತ ಜಯಲಲಿತಾ ತನಗೆ ದೊಡ್ಡಮ್ಮನೆಂದು ತನ್ನ ಪರಿಚಯ ಮಾಡಿಕೊಂಡಿದ್ದ. ನಾನು ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡಲು ಯೋಜಿಸಿದ್ದೇನೆ, ಈಗಾಗಲೇ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದೇನೆ, ನಾನು ನಿಮ್ಮ ಅಭಿಮಾನಿಯಾಗಿದ್ದು, ನಿಮ್ಮನ್ನು ದಕ್ಷಿಣದಲ್ಲಿ ಲಾಂಚ್ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದ್ದನೆಂದು ಜಾಕ್ವೆಲಿನ್ ಹೇಳಿದ್ದಾರೆ.
ಸುಕೇಶ್ ಜೈಲಿನಲ್ಲಿದ್ದಾನೆಂದು ನನಗೆ ತಿಳಿದಿರಲಿಲ್ಲ. ಅವನು ವಿಡಿಯೋ ಕರೆ ಮಾಡಿದಾಗಲೆಲ್ಲ ಯಾವುದೋ ಸೋಫಾ ಮೇಲೆ ಕುಳಿತಿರುತ್ತಿದ್ದ. ಆತನ ಹಿಂದೆ ಕಚೇರಿ ಮಾದರಿಯಂತೆ ಕಾಣುವ ಸೆಟ್ಅಪ್ ಇರುತ್ತಿತ್ತು ಎಂದು ಹೇಳಿದ್ದಾರೆ ಜಾಕ್ವೆಲಿನ್.
ಸುಕೇಶ್ ಚಂದ್ರಶೇಖರ್ ಮಹಾನ್ ವಂಚಕನಾಗಿದ್ದು ತಮಿಳುನಾಡಿನ ಜನಪ್ರಿಯ ರಾಜಕಾರಣಿಯೊಬ್ಬರಿಗೆ ನೂರಾರು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ದೆಹಲಿಯ ಜೈಲು ಸೇರಿದ್ದ. ಅಲ್ಲಿಂದಲೇ ವಂಚನೆ ಸುಲಿಗೆ ಮಾಡುತ್ತಿದ್ದ ಸುಕೇಶ್, ಫೋರ್ಟಿಸ್ನ ಮಾಜಿ ಸಿಇಓವಿನ ಪತ್ನಿಯಿಂದ 200 ಕೋಟಿ ಸುಲಿಗೆ ಮಾಡಿದ್ದ. ಜೈಲಿನಲ್ಲಿದ್ದುಕೊಂಡೆ ಐಶಾರಾಮಿ ಜೀವನ ನಡೆಸುತ್ತಿದ್ದ ಸುಕೇಶ್, ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಬಾಲಿವುಡ್ನ ಹಲವು ನಟಿಯರೊಟ್ಟಿಗೆ ಸಂಪರ್ಕ ಹೊಂದಿದ್ದ. ಜಾಕ್ವೆಲಿನ್ಗೆ ಕೋಟ್ಯಂತರ ಮೌಲ್ಯದ ಉಡುಗೊರೆ, ನಗದು ಹಣವನ್ನು ನೀಡಿದ್ದ ಸುಕೇಶ್, ನೋರಾ ಫತೇಹಿಗೂ ಸಹ ಕೋಟ್ಯಂತರ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದ. ಇದೀಗ ಈ ಪ್ರಕರಣವನ್ನು ಇಡಿ, ದೆಹಲಿ ಪೊಲೀಸ್, ದೆಹಲಿ ಆರ್ಥಿಕ ತನಿಖಾ ವಿಭಾಗ ಹಾಗೂ ಸಿಬಿಐ ತನಿಖೆ ನಡೆಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ