ನಟ ರಜನಿಕಾಂತ್ (Rajinikanth) ಅವರು ಚಿತ್ರರಂಗದಲ್ಲಿ ಈಗಲೂ ಸಖತ್ ಬೇಡಿಕೆ ಹೊಂದಿದ್ದಾರೆ. ತಮಿಳು ನಾಡಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿ ಅವರಿಗೆ ಇದೆ. ಹಣ ಗಳಿಸುವುದು ಮಾತ್ರವಲ್ಲ, ತೆರಿಗೆ ಪಾವತಿಸುವುದರಲ್ಲೂ ಅವರೇ ನಂಬರ್ ಒನ್. ಹೌದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಕಟ್ಟಿದ ವ್ಯಕ್ತಿ ರಜನಿಕಾಂತ್ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಹೇಳಿದೆ. ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸಿದ ಅವರಿಗೆ ಇಲಾಖೆ ಕಡೆಯಿಂದ ಮೆಚ್ಚುಗೆ ಸೂಚಿಸಲಾಗಿದೆ. ರಜನಿಕಾಂತ್ ಪರವಾಗಿ ಅವರ ಪುತ್ರಿ ಐಶ್ವರ್ಯಾ (Aishwaryaa Rajinikanth) ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ಆ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳು ಕಮೆಂಟ್ಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಜುಲೈ 24ರಂದು ಚೆನ್ನೈನಲ್ಲಿ ‘ಆದಾಯ ತೆರಿಗೆ ದಿನ’ ಆಚರಿಸಲಾಯಿತು. ಈ ವೇಳೆ ಅತಿ ಹೆಚ್ಚು ತೆರಿಗೆ ಪಾವತಿಸುವ ಮತ್ತು ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಯಿತು. ತೆಲಂಗಾಣ ಗವರ್ನರ್ ತಮಿಳಿಸಾಯಿ ಸುಂದರರಾಜನ್ ಅವರು ಪ್ರಶಸ್ತಿ ನೀಡಿದರು. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಪರವಾಗಿ ಪ್ರಶಸ್ತಿ ಪಡೆದ ಐಶ್ವರ್ಯಾ ಅವರು, ‘ಅತಿ ಹೆಚ್ಚು ತೆರಿಗೆ ಪಾವತಿಸುವ ತಂದೆಯ ಹೆಮ್ಮೆಯ ಮಗಳು ನಾನು. ಅಪ್ಪನಿಗೆ ಗೌರವ ಸಲ್ಲಿಸಿದ್ದಕ್ಕಾಗಿ ತಮಿಳುನಾಡು ಹಾಗೂ ಪಾಂಡಿಚೆರಿ ಆದಾಯ ತೆರಿಗೆ ಇಲಾಖೆಗೆ ಧನ್ಯವಾದಗಳು’ ಎಂದು ಪೋಸ್ಟ್ ಮಾಡಿದ್ದಾರೆ.
ರಜನಿಕಾಂತ್ ಅವರಿಗೆ ಈಗ 71 ವರ್ಷ ವಯಸ್ಸು. ಈಗಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ನಟಿಸಿದ ‘ಅಣ್ಣಾತೆ’ ಸಿನಿಮಾ 2021ರಲ್ಲಿ ತೆರೆಕಂಡು ಯಶಸ್ಸು ಗಳಿಸಿತು. ಈಗ ಅವರು ‘ಜೈಲರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಬೀಸ್ಟ್’ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ಅಕ್ಷಯ್ ಕುಮಾರ್ಗೂ ಆದಾಯ ತೆರಿಗೆ ಇಲಾಖೆ ಮೆಚ್ಚುಗೆ:
ಬಾಲಿವುಡ್ನಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಪಾವತಿಸುವ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅಕ್ಷಯ್ ಕುಮಾರ್ ಅವರು ಪಾತ್ರರಾಗಿದ್ದಾರೆ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ ನೀಡಲಾಗಿದೆ. ಇಂಗ್ಲೆಂಡ್ಗೆ ತೆರಳಿರುವ ಅಕ್ಷಯ್ ಕುಮಾರ್ ಶೂಟಿಂಗ್ನಲ್ಲಿ ಬ್ಯುಸಿ ಇರುವ ಕಾರಣ ಅವರ ತಂಡದವರು ಈ ಮೆಚ್ಚುಗೆ ಪತ್ರವನ್ನು ಸ್ವೀಕರಿಸಿದ್ದಾರೆ. ಅಕ್ಕಿ ಫ್ಯಾನ್ಸ್ ವಲಯದಲ್ಲಿ ಇದರ ಫೋಟೋ ವೈರಲ್ ಆಗುತ್ತಿದೆ.