ತಮಿಳು ನಟ ಕಾರ್ತಿಕ್ ಸಬೇಶ್ ನಿಧನ: ಸಂಗೀತ ನಿರ್ದೇಶಕ ದೇವಾ ಅಗಲಿಕೆಯ ಬೆನ್ನಲ್ಲೇ ಮತ್ತೊಂದು ಆಘಾತ
ಅಂತಿಮ ದರ್ಶನಕ್ಕಾಗಿ ಕಾರ್ತಿಕ್ ಸಬೇಶ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮಂಗಳವಾರ (ಅಕ್ಟೋಬರ್ 20) ಸಂಜೆ 4.30ರ ಸುಮಾರಿಗೆ ಚೆನ್ನೈನ ವಲಸರವಕ್ಕಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪತ್ನಿ ರಮ್ಯಾ ಕಾರ್ತಿಕ್ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಕಾರ್ತಿಕ್ ಸಬೇಶ್ ಅಗಲಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಮತ್ತೊಂದು ನೋವಿನ ಸುದ್ದಿ ಕೇಳಿಬಂದಿದೆ. ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನರಾದ ಬೆನ್ನಲ್ಲೇ, ಅವರ ಸೋದರಳಿಯ ಹಾಗೂ ಯುವ ನಟ ಕಾರ್ತಿಕ್ ಸಬೇಶ್ ಅವರು ಸೋಮವಾರ (ಅಕ್ಟೋಬರ್ 19) ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ತಿಕ್ ಸಬೇಶ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.15ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಕಾರ್ತಿಕ್ ಸಬೇಶ್ ಅವರ ಅಕಾಲಿಕ ಮರಣವು ತಮಿಳು ಚಿತ್ರರಂಗದ ಗಣ್ಯರನ್ನು ಮತ್ತು ಕುಟುಂಬವರ್ಗದವರನ್ನು ತೀವ್ರ ಆಘಾತಕ್ಕೀಡುಮಾಡಿದೆ. ಕಾರ್ತಿಕ್ ಸಕೇಶ್ ಅವರು ಖ್ಯಾತ ಸಂಗೀತ ನಿರ್ದೇಶಕ ಸಬೇಶ್ ಅವರ ಪುತ್ರ. ಅವರು ಇತ್ತೀಚೆಷ್ಟೇ ನಿಧನರಾದ ಹಿರಿಯ ಸಂಗೀತ ಮಾಂತ್ರಿಕ ದೇವಾ ಅವರ ಸೋದರಳಿಯ. ಕೇವಲ ಮೂರೇ ಮೂರು ದಿನಗಳ ಅಂತರದಲ್ಲಿ ಕುಟುಂಬದ ಇಬ್ಬರು ಸದಸ್ಯರು ಸಾವನ್ನಪ್ಪಿರುವುದು ಅಪಾರ ನೋವನ್ನುಂಟುಮಾಡಿದೆ.
ದೇವಾ ಅವರು ಕಳೆದ ಶನಿವಾರ (ಅಕ್ಟೋಬರ್ 17) ಹೃದಯಾಘಾತದಿಂದ ನಿಧನರಾಗಿದ್ದರು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ 400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ದೇವಾ, ‘ಅಣ್ಣಾಮಲೈ’, ‘ಅರುಣಾಚಲಂ’ ಮತ್ತು ‘ಬಾಷಾ’ ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅಲ್ಲದೆ, ತಮಿಳು ಚಿತ್ರರಂಗದಲ್ಲಿ ‘ಗಾನಾ’ ಶೈಲಿಯ ಸಂಗೀತವನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅಗಲಿಕೆಯ ದುಃಖ ಮರೆಯುವ ಮುನ್ನವೇ ಅವರ ಸೋದರಳಿಯ ಕಾರ್ತಿಕ್ ಕೂಡ ಇಹಲೋಕ ತ್ಯಜಿಸಿರುವುದು ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಮೃತ ಕಾರ್ತಿಕ್ ಸಬೇಶ್ ಅವರು ತಮಿಳಿನಲ್ಲಿ ‘ದಮ್’, ‘ವಲ್ಲವನ್’, ‘ಪಟ್ಟತ್ತು ಯಾನೈ’, ‘ಕುಲಿರ್ 100 ಡಿಗ್ರಿ’ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಕಾರ್ತಿಕ್ ಅಗಲಿಕೆಗೆ ತಮಿಳು ಚಿತ್ರರಂಗದ ನಟರು, ನಿರ್ದೇಶಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ‘ಅಮೃತವರ್ಷಿಣಿ’, ‘ಕೋಟಿಗೊಬ್ಬ’ ಮ್ಯೂಸಿಕ್ ಡೈರೆಕ್ಟರ್ ದೇವಾ ನಿಧನ
ಕಾರ್ತಿಕ್ ಸಬೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಮಂಗಳವಾರ ಸಂಜೆ ಚೆನ್ನೈನ ವಲಸರವಕ್ಕಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಕಾರ್ತಿಕ್ ಸಬೇಶ್ ಅವರು ಪತ್ನಿ ರಮ್ಯಾ ಕಾರ್ತಿಕ್ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




