‘ಜಾತಿಗಾಗಿ ಮರ್ಯಾದಾ ಹತ್ಯೆ ನಡೆದರೆ ಅದು ಹಿಂಸೆ ಅಲ್ಲ’: ನಟನ ಶಾಕಿಂಗ್​ ಹೇಳಿಕೆ ವೈರಲ್​

|

Updated on: Aug 10, 2024 | 5:25 PM

ಮರ್ಯಾದಾ ಹತ್ಯೆ ಬಗ್ಗೆ ತಮಿಳು ಚಿತ್ರರಂಗದ ನಟ, ನಿರ್ದೇಶಕ ರಂಜಿತ್​ ಹೇಳಿಕೆ ನೀಡಿದ್ದು, ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ಅದು ಹಿಂದೆ ಅಲ್ಲ. ಪಾಲಕರು ತೋರಿಸುವ ಕಾಳಜಿ’ ಎಂದು ರಂಜಿತ್​ ಅವರು ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ರಂಜಿತ್​ ಮನಸ್ಥಿತಿ ಎಷ್ಟು ಕೊಳಕಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

‘ಜಾತಿಗಾಗಿ ಮರ್ಯಾದಾ ಹತ್ಯೆ ನಡೆದರೆ ಅದು ಹಿಂಸೆ ಅಲ್ಲ’: ನಟನ ಶಾಕಿಂಗ್​ ಹೇಳಿಕೆ ವೈರಲ್​
ರಂಜಿತ್​
Follow us on

ತಮಿಳಿನ ನಟ, ನಿರ್ದೇಶಕ ರಂಜಿತ್​ ಒಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ. ಅಂತರ್​ಜಾತಿ ಪ್ರೇಮ/ವಿವಾಹ ನಡೆದರೆ ಪಾಲಕರು ನಡೆಸುವ ಮರ್ಯಾದಾ ಹತ್ಯೆ ಬಗ್ಗೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುವ ಕಾಲದಲ್ಲಿ ರಂಜಿತ್​ ಅವರು ಇಂಥ ಹತ್ಯೆವನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಹೇಳಿಕೆ ಎಲ್ಲರಿಗೂ ಶಾಕಿಂಗ್​ ಎನಿಸಿದೆ. ದೇಶಾದ್ಯಂತ ಈ ಬಗ್ಗೆ ಚರ್ಚೆ ಆಗುತ್ತಿದೆ. ರಂಜಿತ್​ ಅವರ ಮನಸ್ಥಿತಿ ತುಂಬ ಕೀಳುಮಟ್ಟದಲ್ಲಿ ಇದೆ ಎಂದು ನೆಟ್ಟಿಗರು ಚಾಟಿ ಬೀಸುತ್ತಿದ್ದಾರೆ. ರಂಜಿತ್​ ಹೇಳಿಕೆ ನೀಡಿರುವ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ರಂಜಿತ್​ ಅವರು ‘ಕವುಂದಂಪಾಲಾಯಂ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್​ 9ರಂದು ತಮಿಳುನಾಡಿನ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪ್ರೇಕ್ಷಕರ ಜೊತೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಬಳಿಕ ರಂಜಿತ್​ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮರ್ಯಾದಾ ಹತ್ಯೆಯ ಪರವಾಗಿ ರಂಜಿತ್​ ಮಾತನಾಡಿದ್ದಾರೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ; ಅಂತರ್ಜಾತಿ ವಿವಾಹವಾದ ಮಗಳಿಗೆ ಬೆಂಕಿ ಹಚ್ಚಿ ಕೊಂದ ತಂದೆ

‘ತಂದೆ-ತಾಯಿಗೆ ಮಾತ್ರ ಆ ನೋವು ಏನು ಎಂಬುದು ಗೊತ್ತು. ಒಂದು ಬೈಕ್​ ಕಳೆದುಹೋದರೆ ಏನಾಯಿತು ಅಂತ ನಾವು ನೋಡಲು ಹೋಗುವುದಿಲ್ಲವೇ? ಅದೇ ರೀತಿ ಮಕ್ಕಳನ್ನೇ ಜೀವನ ಎಂದುಕೊಂಡ ಪಾಲಕರು ಕೂಡ ಸಿಟ್ಟು ತೋರಿಸುತ್ತಾರೆ. ಅದು ಹಿಂಸೆ ಅಲ್ಲವೇ ಅಲ್ಲ. ಮಕ್ಕಳ ಬಗ್ಗೆ ಅವರು ತೋರಿಸುವ ಕಾಳಜಿ ಅದು’ ಎಂದು ರಂಜಿತ್ ಹೇಳಿದ್ದಾರೆ. ಈ ಹೇಳಿಕೆಗೆ ಸೋಶಿಯಲ್​ ಮೀಡಿಯಾದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಈ ಮೊದಲು ಕೂಡ ರಂಜಿತ್​ ಅವರು ವಿವಾದ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡಿದ್ದರು. ಮಹಿಳೆಯರನ್ನು ಅವಹೇಳನ ಮಾಡುವ ರೀತಿಯಲ್ಲಿ ಅವರು ಮಾತನಾಡಿದ್ದರು. ಈಗ ಅವರು ಮರ್ಯಾದಾ ಹತ್ಯೆ ಬಗ್ಗೆ ಮಾತನಾಡಿರುವುದಕ್ಕೆ ನೆಟ್ಟಿಗರು ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ. ‘ನೀವು ಕೇವಲ ತಪ್ಪಾದ ಹೇಳಿಕೆಗಳನ್ನು ನೀಡುತ್ತಿಲ್ಲ, ಇಡೀ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದ್ದೀರಿ. ಇದು ಅಪಾಯಕಾರಿ. ಮರ್ಯಾದಾ ಹತ್ಯೆ ಎಂದರೆ ಪಾಲಕರು ತೋರಿಸುವ ಪ್ರೀತಿ ಅಲ್ಲ. ಅದು ಮರ್ಡರ್​’ ಎಂದು ಜನರು ರಂಜಿತ್​ಗೆ ಪಾಠ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.