ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ಯುವ ನಟಿ ದೀಪಾ (Actress Deepa) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರಿಗೆ 29 ವರ್ಷ ವಯಸ್ಸಾಗಿತ್ತು. ಚೆನ್ನೈ ಹೊರವಲಯದ ಅಪಾರ್ಟ್ಮೆಂಟ್ನಲ್ಲಿ ಶನಿವಾರ (ಸೆ.17) ಅವರ ಮೃತದೇಹ ಪತ್ತೆ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ದೀಪಾ ಅವರ ಮೂಲ ಹೆಸರು ಪಾಲಿನ್ ಜೆಸ್ಸಿಕಾ (Pauline Jessica). ಆದರೆ ಚಿತ್ರರಂಗದಲ್ಲಿ ಅವರು ದೀಪಾ ಎಂದು ಗುರುತಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಈಗ ಅವರು ಆತ್ಮಹತ್ಯೆ (Deepa Suicide) ಮಾಡಿಕೊಂಡಿರುವುದು ನೋವಿನ ಸಂಗತಿ.
ಕಳೆದ ಕೆಲವು ದಿನಗಳಿಂದ ದೀಪಾ ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಪ್ರೀತಿ-ಪ್ರೇಮದ ವಿಚಾರವೇ ಅವರ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ದೀಪಾ ಬರೆದಿರುವ ಸೂಸೈಡ್ ನೋಟ್ ಕೂಡ ಪತ್ತೆ ಆಗಿದೆ. ಆದರೆ ಯಾರ ಹೆಸರನ್ನೂ ಅದರಲ್ಲಿ ಅವರು ಪ್ರಸ್ತಾಪಿಸಿಲ್ಲ ಎಂದು ಹೇಳಲಾಗುತ್ತಿದೆ. ಅವರು ಯಾರನ್ನು ಪ್ರೀತಿಸುತ್ತಿದ್ದರು ಎಂಬುದನ್ನು ತಿಳಿಯಲಾಗುತ್ತಿದೆ.
ಹಲವು ಬಾರಿ ಫೋನ್ ಮಾಡಿದಾಗ ದೀಪಾ ಅವರು ಕರೆ ಸ್ವೀಕರಿಸಲಿಲ್ಲ. ಆಗ ಕುಟುಂಬದವರಿಗೆ ಅನುಮಾನ ಬಂತು. ಅಪಾರ್ಟ್ಮೆಂಟ್ಗೆ ಬಂದು ನೋಡಿದಾಗ ಅವರ ಮೃತದೇಹ ಕಾಣಿಸಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಮಿಳು ಚಿತ್ರರಂಗದಲ್ಲಿ ದೀಪಾ ಅವರು ಈಗತಾನೇ ಗುರುತಿಸಿಕೊಳ್ಳುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ ಎಲ್ಲರಿಗೂ ಈ ಸಾವಿನ ಸುದ್ದಿ ಶಾಕ್ ನೀಡಿದೆ. ಅನೇಕ ಆಫರ್ಗಳು ದೀಪಾ ಅವರ ಕೈಯಲ್ಲಿದ್ದವು ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಕಾರಣದಿಂದಾಗಿ ಅವರು ಜೀವನ ಅಂತ್ಯ ಮಾಡಿಕೊಂಡಿರುವುದು ಎಲ್ಲರಲ್ಲೂ ಬೇಸರ ಮೂಡಿಸಿದೆ.
ಮಿಸ್ಕಿನ್ ನಿರ್ದೇಶನದ ‘ತುಪ್ಪರಿವಾಲನ್’ ಸಿನಿಮಾದಲ್ಲಿ ದೀಪಾ ಅವರು ಒಂದು ಪಾತ್ರ ಮಾಡಿದ್ದರು. ಇದಲ್ಲದೇ ಅನೇಕ ಸಿನಿಮಾಗಳಲ್ಲಿ ಅವರು ಚಿಕ್ಕ-ಪುಟ್ಟ ಪಾತ್ರಗಳನ್ನು ನಿಭಾಯಿಸಿದ್ದರು. ರಿಲೇಷನ್ಶಿಪ್ ವಿಚಾರದಲ್ಲಿ ನೊಂದಿದ್ದರಿಂದ ಅವರು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು. ಅದರಿಂದ ಅವರು ಈ ರೀತಿ ಕೆಟ್ಟ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗುತ್ತಿದೆ.
ಬಣ್ಣದ ಲೋಕದಲ್ಲಿ ಬಾಳಿ ಬದುಕಬೇಕಾಗಿದ್ದ ದೀಪಾ ಅವರ ನಿಧನದ ಸುದ್ದಿ ತಿಳಿದು ಇಡೀ ತಮಿಳು ಚಿತ್ರರಂಗಕ್ಕೆ ಆಘಾತ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಈ ರೀತಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:10 am, Mon, 19 September 22