‘ಕಲರ್ಸ್ ಕನ್ನಡ’ (Colors Kannada) ವಾಹಿನಿ ನಿತ್ಯ ಹೊಸಹೊಸ ರಿಯಾಲಿಟಿ ಶೋ ಹಾಗೂ ಧಾರಾವಾಹಿ ಮೂಲಕ ವೀಕ್ಷಕರ ಎದುರು ಬರುತ್ತಿದೆ. ಹತ್ತು ಹಲವು ರಿಯಾಲಿಟಿ ಶೋಗಳನ್ನು ಪರಿಚಿಯಿಸಿದ ಖ್ಯಾತಿ ಈ ವಾಹಿನಿಗೆ ಇದೆ. ‘ಡಾನ್ಸಿಂಗ್ ಚಾಂಪಿಯನ್’ ಹೆಸರಿನ ಶೋ ಮೂಲಕ ವೀಕ್ಷಕರನ್ನು ರಂಜಿಸುವ ಕೆಲಸ ಆಗುತ್ತಿದೆ. ಈಗ ‘ಡಾನ್ಸಿಂಗ್ ಚಾಂಪಿಯನ್’ (Dancing Champion) ಫಿನಾಲೆ ಹಂತ ತಲುಪಿದೆ. ಇದೇ ಭಾನುವಾರ (ಮೇ 29) ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದಕ್ಕೆ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಅವರು (Ashwini Puneeth Rajkumar) ಆಗಮಿಸಿದ್ದು ವಿಶೇಷ.
ಪುನೀತ್ ಅವರನ್ನು ಕಳೆದುಕೊಂಡು ಏಳು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಅವರಿಲ್ಲ ಎನ್ನುವ ನೋವು ಎಲ್ಲರಲ್ಲೂ ಹಾಗೆಯೇ ಉಳಿದುಕೊಂಡಿದೆ. ಪುನೀತ್ ಪತ್ನಿ ಅಶ್ವಿನಿ ಅವರು ಆ ಘಟನೆಯಿಂದ ಸಾಕಷ್ಟು ನೊಂದಿದ್ದಾರೆ. ಆದರೆ, ಅವರಿಲ್ಲದೆ ಜೀವನ ಸಾಗಿಸಲೇಬೇಕಿದೆ. ಹೀಗಾಗಿ, ಅವರು ಮರಳಿ ಚಿತ್ರರಂಗದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಪುನೀತ್ ಕನಸಿನ ಕೂಸು ‘ಪಿಆರ್ಕೆ ಪ್ರೊಡಕ್ಷನ್’ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸುವ ಕೆಲಸ ಆಗುತ್ತಿದೆ. ಈ ಮಧ್ಯೆ ಅಶ್ವಿನಿ ಅವರು ಕಿರುತೆರೆ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೂ ಕಲರ್ಸ್ ಕನ್ನಡಕ್ಕೂ ಒಳ್ಳೆಯ ನಂಟಿತ್ತು. ‘ಕನ್ನಡದ ಕೋಟ್ಯಧಿಪತಿ’ ನಾಲ್ಕನೇ ಸೀಸನ್ ಕಲರ್ಸ್ನಲ್ಲಿ ಪ್ರಸಾರವಾಯಿತು. ಇದರ ನಿರೂಪಣೆಯನ್ನು ಪುನೀತ್ ನಿರ್ವಹಿಸುತ್ತಿದ್ದರು. ಈ ಕಾರಣಕ್ಕೆ ಅಶ್ವಿನಿ ಅವರಿಗೂ ಕಲರ್ಸ್ ಜತೆ ನಂಟು ಬೆಳೆದಿದೆ. ‘ಡಾನ್ಸಿಂಗ್ ಚಾಂಪಿಯನ್’ ಫಿನಾಲೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.
ಇದನ್ನೂ ಓದಿ: ಡಾ.ರಾಜ್ ಜನ್ಮದಿನ ಹಿನ್ನೆಲೆ; ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಅಶ್ವಿನಿ ಪುನೀತ್
ಈ ಬಾರಿಯ ವಿಶೇಷ ಎಂದರೆ ಪುನೀತ್ ಅವರ ರೀತಿಯಲ್ಲೇ ಕಾಣುವ ಟ್ರೋಫಿ ಮಾಡಿಸಲಾಗಿದೆ. ಗೆದ್ದವರಿಗೆ ಈ ಟ್ರೋಫಿ ಸಿಗಲಿದೆ. ಈ ಕಾರಣಕ್ಕೂ ಈ ಗೆಲುವು ತುಂಬಾನೇ ವಿಶೇಷ ಆಗಿರಲಿದೆ. ಸದ್ಯ, ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಇದರ ಪ್ರೋಮೋ ಹಂಚಿಕೊಂಡಿದೆ. ಅಭಿಮಾನಿಗಳು ಪುನೀತ್ ಇಲ್ಲ ಎಂಬ ಬೇಸರವನ್ನು ಕಮೆಂಟ್ ಸೆಕ್ಷನ್ನಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಭಾನುವಾರ ಸಂಜೆ 6 ಗಂಟೆಗೆ ಫಿನಾಲೆ ಆರಂಭವಾಗಲಿದೆ. ಅಶ್ವಿನಿ ಪುನೀತ್ರಾಜ್ಕುಮಾರ್ ಅವರನ್ನು ಕಿರುತೆರೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.